ನವದೆಹಲಿ, ಮಾ. 16 : ದೇಶದ 85 ಲಕ್ಷ ಸಂಬಳದಾರರಲ್ಲಿ ನಗು ಅರಳುವಂತೆ ಮಾಡಿರುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು, 2012-13ನೇ ಸಾಲಿನ ಬಜೆಟ್ ಮಂಡನೆಯಲ್ಲಿ, ನಿರೀಕ್ಷೆಯಂತೆ ಆದಾಯ ತೆರಿಗೆ ಮಿತಿಯನ್ನು 1.8 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರು.ಗೆ ಏರಿಸಬೇಕೆಂದು ಶಿಫಾರಸು ಮಾಡಿತ್ತು.
ಇದರ ಪ್ರಕಾರ, 2 ಲಕ್ಷ ರು.ವರೆಗೆ ಸಂಬಳ ಪಡೆಯುವವರು ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. 2ರಿಂದ 5 ಲಕ್ಷ ರು. ಸಂಬಳ ಪಡೆಯುವವರು ಶೇ.10ರಷ್ಟು ತೆರಿಗೆ ಕಟ್ಟಬೇಕು. 5 ಲಕ್ಷ ರು.ನಿಂದ 10 ಲಕ್ಷ ರು. ಸಂಬಳ ಗಳಿಸುವವರು ಶೇ.20ರಷ್ಟು ಮತ್ತು 10 ಲಕ್ಷ ರು.ಗಿಂತ ಹೆಚ್ಚು ಆದಾಯ ಪಡೆಯುವವರು ಶೇ.30ರಷ್ಟು ಸಂಬಳ ಪಡೆಯಬೇಕು.
ಕಳೆದ ಮುಂಗಡ ಪತ್ರದಲ್ಲಿ ಶೇ.20ರಷ್ಟು ತೆರಿಗೆ ಕಟ್ಟಬೇಕಾದವರ ಆದಾಯ ಮಿತಿಯನ್ನು 8 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಈ ಬಾರಿ ಆ ವರ್ಗದವರಿಗೆ ಭರ್ತಿ 2 ಲಕ್ಷ ರು. ಏರಿಕೆ ದೊರೆತಿದೆ. ಅಂದರೆ, ಕಳೆದ ಬಾರಿ 8 ಲಕ್ಷಕ್ಕಿಂತ ಹೆಚ್ಚಿಗೆ ಆದಾಯವಿದ್ದ ನೌಕರರು ಶೇ.20ರಷ್ಟು ತೆರಿಗೆ ಕಟ್ಟಬೇಕಾಗಿತ್ತು. ಆದರೆ, ಈ ಬಾರಿಯಿಂದ 10 ಲಕ್ಷ ರು.ಗಿಂತ ಆದಾಯ ಹೆಚ್ಚಿರುವವರು ಶೇ.20ರಷ್ಟು ತೆರಿಗೆ ಕಟ್ಟಬೇಕು.
ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರು.ಗೆ ಏರಿಸಿದ್ದಾರಾದರೂ, ಇದು ಮಹಿಳಾ ನೌಕರರಿಗೆ ಮತ್ತು ಹಿರಿಯ ನಾಗರಿಕರಿಗೂ ಅನ್ವಯವಾಗುತ್ತದಾ ಎಂಬುದನ್ನು ಪ್ರಣಬ್ ಮುಖರ್ಜಿ ಪ್ರಸ್ತಾಪಿಸಿಲ್ಲ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, 5 ಲಕ್ಷ ರು.ವರೆಗೆ ಸಂಬಳ ಪಡೆಯುವವರು ಯಾವುದೇ ಇನ್ಕಂ ಟ್ಯಾಕ್ಸ್ ರಿಟರ್ನ್ ಫಾರಂ ತುಂಬಬೇಕಾಗಿಲ್ಲ.
ರಿಟರ್ನ್ ಫೈಲ್ ಮಾಡುವುದು ಕ್ಷೇಮ : 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ರಿಟರ್ನ್ ಫೈಲ್ ಮಾಡಬೇಕಾಗಿಲ್ಲವಾದರೂ, ನಮ್ಮ ಹೂಡಿಕೆಯ ಆಧಾರದ ಮೇಲೆ ರಿಫಂಡ್ ಬರಬೇಕಿದ್ದರೆ ಅಥವಾ ಯಾವುದೇ ಸಾಲ ಪಡೆಯಲು ಯತ್ನಿಸುತ್ತಿದ್ದರೆ ಅಂಥವರು ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಒಳಿತು.