ಉಘೇ ಬ್ಯಾಟ್ಗಾರ ರಂಗಣ್ಣ (ಕೋಲುಬೇಟೆ ಆಚರಣೆ):-
ಡಿಸೆಂಬರ್ ಕೊನೆಯ ಗುರುವಾರ ಬಂತಂದ್ರೆ ಸಾಕು. ಕೋಲು ಬೇಟೆಗೆ ಹೋಗಲಿಕ್ಕೆ ಮನೇಲಿದ್ದ ಆಯುಧಗಳನ್ನು ತೊಳೆಸಿ, ಒಪ್ಪ ಓರಣ ಮಾಡಿಟ್ಟುಕೊಂಡು ಬೇಟೆಗೆ ಸಜ್ಜಾಗುತ್ತಿದ್ರು ನಮ್ಮ ಜನ. ಈಗಲೂ ಅಷ್ಟೆ. ಈ ವರ್ಷ ಡಿಸೆಂಬರ್ ೨೬ ಕ್ಕೆ ಬಂದು ನೋಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕೋಲುಬೇಟೆ ಎಷ್ಟು ವೈಭವದಿಂದ ನಡೆಯುತ್ತೇ ಅನ್ನೋದನ್ನು. ಏನಪ್ಪಾ ಇದು! ಸರ್ಕಾರ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಷೇದಿಸಿದ್ರು ಈ ಜನ ಅದ್ಹೇಗೆ ವೈಭವದಿಂದ ಬೇಟೆ ನಡೆಸ್ತಾರೆ ಅಂತ ನೀವು ಆಶ್ಚರ್ಯಪಡಬಹುದು. ಆದರೆ, ಮತ್ತೊಮ್ಮೆ ನಾನು ಪ್ರಮಾಣೀಕರಿಸಿ ಹೇಳ್ತೀನಿ ಇಲ್ಲಿ ಖಂಡಿತವಾಗಿಯೂ ಬೇಟೆ ವೈಭವದಿಂದ ನಡೆಯುತ್ತೆ. ಆದರೆ, ಯಾವುದೇ ಪ್ರಾಣಿ ಪಕ್ಷಿಗಳ ಬೇಟೆ ನಡೆಯೋದಿಲ್ಲ. ಇಲ್ಲಿ ನಡೆಯೋದು ಕೇವಲ ಸಾಂಕೇತಿಕ ಬೇಟೆಯ ಆಚರಣೆಯಷ್ಟೆ.
ಇದು ಬೆಂಗಳೂರು ಗ್ರಾಮಾಂತರ ಜನರ ಜಾನಪದ ಆಚರಣೆ. ಚೋಳರ ಕಾಲದಿಂದ ಈ ಬೇಟೆಯ ಆಚರಣೆ ನಡೆದುಕೊಂಡು ಬಂದಿದೆ ಅಂತ ಇಲ್ಲಿನ ಹಿರಿಯರು ಹೇಳ್ತಾರೆ. ಹುಲಿಕುಂಟೆ ಹಾಗೂ ಸುತ್ತಮುತ್ತಲಿನ ಜನರ ಆರಾಧ್ಯ ದೈವ ಶ್ರೀ ಬೇಟೆ ರಂಗನಾಥ ಸ್ವಾಮಿ ಇಲ್ಲಿನ ಜನರಿಗೆ ಶಕ್ತಿಯ ಸಾಕಾರ ರೂಪ.
ಕೋಲುಬೇಟೆಯ ದಿನ ಮಧ್ಯಾಹ್ನದ ಹೊತ್ತಿಗೆ ಕುದುರೆ ಮೇಲೆ ಕುಳಿತ ಪೇಟಧಾರಿ ಶ್ರೀ.ರಂಗನಾಥ ಸ್ವಾಮಿಯನ್ನು ಹೊತ್ತ ಪಲ್ಲಕ್ಕಿಯ ಜೊತೆಗೆ ನೂರಾರು ಮಂದಿ ಆಯುಧ ಹಿಡಿದ ಜನ ಹುಲಿಕುಂಟೆ ಗ್ರಾಮದಿಂದ ಚೆನ್ನಬಸವಯ್ಯನ ಪಾಳ್ಯದ ಬಳಿ ಬಂದು ಸೇರ್ತಾರೆ. ನಂತರ ಅಲ್ಲಿರುವ ಹುತ್ತದ ಸುತ್ತ ಸೌದೆಯಿಂದ ಹೊಗೆಹಾಕಿ, ಜೋರಾಗಿ ಬಾಯಿ ಬಡಿದುಕೊಳ್ಳುತ್ತಾ, ವಾದ್ಯ ಮಾಡುತ್ತಾ ಬೇಟೆ ನೀಡುವ ಸಲುವಾಗಿ ದೇವರನ್ನು ಪ್ರಾರ್ಥಿಸಿ ಮುಂದೆ ಸಾಗುತ್ತಾರೆ. ಈ ಆಚರಣೆಯನ್ನು ಹುಲಿಕುಂಟೆಯ ಸುತ್ತಮುತ್ತಲ ಕೆಲ ಗ್ರಾಮದಲ್ಲಿ ಒಂದು ವಾರದ ಹಿಂದೆಯೇ, ಗುರುವಾರದಂದು ತಮ್ಮ ಗ್ರಾಮದ ಶಕ್ತಿದೇವತೆಗೆ ಹಣ್ಣುಕಾಯಿ ಮಾಡಿಸಿ, ತಮ್ಮ ಆಯುಧಗಳನ್ನು ಶಕ್ತಿದೇವತೆಯ ಮುಂದಿಟ್ಟು ಬೇಟೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ. ಈ ಆಚರಣೆಗೆ ಹೊಗೆಬೇಟೆ ಎಂಬುದಾಗಿ ಕರೆಯುತ್ತಾರೆ.
ನಂತರ ಪಲ್ಲಕ್ಕಿ ಮುಂದುವರಿದು, ಚೆನ್ನಬಸವಯ್ಯನ ಪಾಳ್ಯಕ್ಕೂ ಮುಂದೆ ಇರುವ ದಿಣ್ಣೆಯಲ್ಲಿ ನಿರ್ಮಿಸಲಾಗಿರುವ ಮಂಟಪ ಅಥವಾ ಸ್ವಾಮಿಯ ಗದ್ದುಗೆಯಲ್ಲಿ ಶ್ರೀ.ಬೇಟೆ ರಂಗನಾಥಸ್ವಾಮಿಯನ್ನು ಪ್ರತಿಷ್ಟಾಪಿಸುವ ಸಮಯಕ್ಕೆ ಹುಲಿಕುಂಟೆ ಗ್ರಾಮದ ಜನತೆಯ ಜೊತೆಗೆ, ಸುತ್ತ ಮುತ್ತಲಿನ ಗ್ರಾಮದ ಜನರೆಲ್ಲಾ ತಂಡೋಪತಂಡವಾಗಿ ಪೊದೆಗಳಿಂದ, ಹೊಲಗಳಿಂದ, ಆಯುಧಗಳನ್ನಿಡಿದು, ಜೋರಾಗಿ ಗದ್ದಲ ಮಾಡುತ್ತಾ, ಬಾಯಿ ಬಡಿದುಕೊಳ್ಳುತ್ತಾ, ಸ್ವಾಮಿಗೆ ಜಯಘೋಷ ಹಾಕುತ್ತಾ ಓಡಿ ಬರುವ ದೃಶ್ಯ ಮೈನವಿರೇಳಿಸುವಷ್ಟು ಸುಂದರವಾಗಿರುತ್ತದೆ. ಅಲ್ಲಿ ತಾವು ಬೇಟೆಯಾಡಿ ತಂದ ಬಲಿಯನ್ನು ಸ್ವಾಮಿಗೆ ಅರ್ಪಿಸುವ ಸಾಂಕೇತಿಕ ಆಚರಣೆ ನಡೆಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ನಂತರ ಕೋಲುಬೇಟೆ ಉತ್ಸವ ಜಾತ್ರೆಯಾಗಿ ಮಾರ್ಪಾಟಾಗುತ್ತದೆ. ಬೇಟೆಗೆ ಬಂದ ಜನರೆಲ್ಲಾ ಸ್ವಾಮಿಗೆ ಹಣ್ಣು ಕಾಯಿ ಮಾಡಿಸಿ, ಅಲ್ಲಿ ಸೇರಿರುವ ಅಂಗಡಿಗಳಲ್ಲಿ ಕಡ್ಲೆಪುರಿ, ಬತ್ತಾಸು, ಚೌಚೌ, ಸಿಹಿತಿಂಡಿ, ಮಕ್ಕಳ ಆಟಿಕೆ ಕೊಂಡು ಮನೆಗೆ ತೆರಳುತ್ತಾರೆ. ಈ ದಿನ ಹುಲಿಕುಂಟೆಯೂ ಸೇರಿದಂತೆ ಸುತ್ತಮುತ್ತಲ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಸಹ ಹಿದುಕಿದ ಅವರೇಬೇಳೆ ಸಾರು ವಿಶೇಷ. ಶತಮಾನಗಳ ಇತಿಹಾಸವಿರುವ ಈ ವಿಶಿಷ್ಟ ಆಚರಣೆ ನೋಡುಗರ ಕಣ್ಣಿಗೆ ಒಂದು ವಿಶಿಷ್ಟ ಹಬ್ಬ. ಬನ್ನಿ ಕೋಲು ಬೇಟೆ ಆಚರಣೆಯಲ್ಲಿ ನೀವೂ ಪಾಲ್ಗೊಳ್ಳಿ.
...... ವಿಶ್ವನಾಥ್.ಬಿ.ಮಣ್ಣೆ