ಪುಟಗಳು

ಕೇಳಿಸದೆ ಹೃದಯದ ಸದ್ದು (ಲವ್ ಡೈಜೆಸ್ಟ್)

ಪ್ರೀತಿಯ ಸಹಿ ಮಾಡುವೆಯ (ಲವ್ ಲೆಸೆನ್-೧ )
ಕ್ಷಣ ಕಾಲದ ನಿನ್ನ ಮುನಿಸು ಚಂದವಾದರೂ ನನ್ನಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತದೆ. ತಾನು ದುಃಖದಲ್ಲಿರುವಾಗ ತನ್ನೆಲ್ಲಾ ನೋವುಗಳ ಅರಿವಾಗುತ್ತದೆಯೇ ಹೊರತು, ಮತ್ತೊಬ್ಬರ ದುಃಖದಿಂದ ಅದನ್ನು ಅನುಭವಿಸುವುದಕ್ಕಾಗಲಿ, ಅರಿತುಕೊಳ್ಳುವುದಕ್ಕಾಗಲಿ ಸಾಧ್ಯವಿಲ್ಲ. ಅಂತೆಯೇ ದುಃಖ ಅಂದ್ರೆ ಏನು? ಅದರ ತೀವ್ರತೆ, ಪರಿಣಾಮ ಹೇಗಿರುತ್ತೆ ಅನ್ನೋದನ್ನ ಪ್ರತ್ಯಕ್ಷವಾಗಿ ಸ್ವತಃ ಅನುಭವಿಸಿ ತಿಳಿದುಕೊಳ್ಳಲೆಂದೇ ಅಲ್ಲವೇ ನೀನು ಆಗಾಗ ನನ್ನ ಮೇಲೆ ಮುನಿಸಿಕೊಳ್ಳುವುದು. ಹೌದು, ಸಮರಸದ ಬಾಳ್ವೆಗೆ ಸರಸ-ವಿರಸಗಳೆರೆಡೂ ಅವಶ್ಯಕವೇ. ಆದರೆ, ಅದು ಕೆಲವು ಭಾರಿ ಅನಿವಾರ್ಯವೇ? ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತದೆ. ಇದ್ದರೂ ಇರಬಹುದೇನೋ, ಒಬ್ಬೊಬ್ಬರಿಗೆ ಒಂದೊಂದು ನೀತಿ.
ಅಂತೂ ನಿನ್ನ ಮುನಿಸು, ಕೋಪ ನನ್ನಲ್ಲಿರುವ ನನ್ನನ್ನು ಹೆಚ್ಚು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಸ್ವಯಂ ಆತ್ಮವಿಮರ್ಶೆಯಲ್ಲಿ ತೊಡಗಿಸಿಕೊಂಡು ನಿಜವಾದ ನನ್ನನ್ನು ಅನ್ವೇಷಿಸಿ, ಅವಲೋಕಿಸಿ ಹೊಸತೊಂದು ಸೃಷ್ಟಿ ಮೂಡಿಸುವಲ್ಲಿ ಯಶಸ್ವಿ ಪಾತ್ರ ವಹಿಸುತ್ತದೆ. ಪ್ರತಿಭಾರಿಯೂ ಹೊಸತನವನ್ನು ಪರಿಚಯಿಸತೊಡಗುತ್ತದೆ. ಅದರಂತೆಯೇ ನಡೆಯಲು ಬುದ್ದಿ ಹೇಳುತ್ತದೆ.
ಇಷ್ಟಕ್ಕೂ ಪ್ರೀತಿಯಿಂದಲೇ ಇವುಗಳನ್ನು ತಿಳಿಸಿ ಹೇಳಬಹುದಿತ್ತಲ್ಲ ಅದಕ್ಕೇಕೆ ಈ ಬಗೆಯ ಪಜೀತಿ ಎಂದು ನನ್ನ ಮನಸ್ಸಿನಲ್ಲಿ ಮೂಡುವ ಪ್ರಶ್ನೆ, ಪ್ರೀತಿಯಿಂದ ಹೇಳಲು ಹೋಗಿ ಸಾಧ್ಯವಾಗದಿದ್ದಾಗಲೇ ಅಲ್ಲವೇ ಕೊಪಿಸಿಕೊಂಡದ್ದು ಎಂಬುದನ್ನು ಮರೆತಿರುತ್ತದೆ.
ಹುಚ್ಚು ಮನಸ್ಸೇ ಹೀಗೆ, ಅದೊಂದು ಬಾರಿ ನಿನ್ನ ಮುನಿಸಿನಿಂದ ಕಂಗೆಟ್ಟವನಂತಾಗಿದ್ದ ನಾನು ಸಿಗರೇಟ್ ಹಚ್ಚಿಕೊಂಡ ಬೆಂಕಿ ಕಡ್ಡಿಯ ಮೇಲೆ ಕೋಪ ತೋರಿಸಲು ಹಾಗೆಯೇ ಆರಿಸದೆ ಕಸದ ಬುಟ್ಟಿಗೆ ಹಾಕಿದೆ, ಅದರಿಂದ ಇಡೀ ಕಸದ ಬುಟ್ಟಿಯೇ ಹತ್ತಿಕೊಂಡಿತಲ್ಲದೆ ಅನಾಹುತಕ್ಕೆ ಎಡೆ ಮಾಡಿಕೊಟ್ಟ ಕೈಯನ್ನೇ ಹಾಕಿ ಆರಿಸಬೇಕಾಯ್ತು. ಆಗಲೇ ನಿಜವಾಗಿ ಅರ್ಥವಾದದ್ದು ಮುನಿಸು ಎಲ್ಲ ಸಂಧರ್ಭಗಳಲ್ಲೂ ಬುದ್ಧಿ ಕಲಿಸುತ್ತದೆ ಎಂದು.
ಎಲ್ಲರೂ ಹೇಳುತ್ತಾರೆ ನನ್ನವಳು ಮುನಿಸಿಕೊಂಡರೆ ಭಯವಾಗುತ್ತದೆ ಎಂದು. ನನಗೂ ಮೊದಮೊದಲು ಹಾಗೆಯೇ ಅನಿಸುತ್ತಿತ್ತು. ಆದರೆ, ಈಗ ನೀನು ಮುನಿಸಿಕೊಂಡಾಗಲೆಲ್ಲ ಜ್ಞಾನೋದಯವಾಗುತ್ತದೆ. ಅರಿವಿನ ಹೊಸತೊಂದು ಬಾಗಿಲು ತೆರೆದು ಸತ್ಯದ ದರ್ಶನವಾಗುತ್ತದೆ.
ನಲ್ಮೆಯ ಗೆಳತಿ ಈಗ ನಾನು ಪರಿಪೂರ್ಣನಾಗಿದ್ದೇನೆ. ಇನ್ನು ನೀನು ಕೋಪಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ, ನಿನ್ನ ಅಗಲಿ ಕಳೆದ ಕ್ಷಣಗಳಲ್ಲಿ ನೀ ನನ್ನ ಮೇಲೆ ಮುನಿಸಿಕೊಂಡುದಕ್ಕೆ ಕಾರಣವನ್ನು ಹುಡುಕುತ್ತಾ ನನ್ನ ತಪ್ಪುಗಳನ್ನೆಲ್ಲಾ ತಿಳಿದು ತಿದ್ದಿ ತೀಡಿ ಸರಿಮಾಡಿಕೊಂಡು ಬಂದಿದ್ದೇನೆ. ಈಗಲಾದರೂ ನನ್ನ ಮನಸ್ಸಿನ ಪುಟದ ಮೇಲೆ ಕೆಂಪು ಶಾಯಿಯಿಂದ ಸೊನ್ನೆ ಸುತ್ತದೆ ಪ್ರೀತಿಯಿಂದ ಸಹಿ ಮಾಡುವೆಯಾ ಪ್ಲೀಸ್.
- ವಿಶ್ವನಾಥ್.ಬಿ.ಮಣ್ಣೆ (ಜಿಗುವೆ)