ಪುಟಗಳು

ಸುಘೋಷ್ ಬರೆದ ಕಾಡುವ ಕಥೆ: ಗಾಂಧಿ ಹತ್ಯೆ


ನುಣ್ಣನೆಯ ಬೋಳು ತಲೆಯ ಮೇಲೆ ಸೂರ್ಯನ ಪ್ರತಿಬಿಂಬ ತುಸು ಸ್ಪಷ್ಟವಾಗಿಯೇ ಕಾಣುತಿತ್ತು. ಎಡಗೈಯಿಂದ ತಲೆಯನ್ನೂ, ಬಲಗೈಯಿಂದ ಪಿರ್ರೆಯನ್ನೂ ತುರಿಸುತ್ತ ಮಟಮಟ ಮಧ್ಯಾಹ್ನದಲ್ಲಿ ಸೋಮಶೇಖರ್ ಅಲಿಯಾಸ್ ಚೋಮ ಅಲಿಯಾಸ್ ಜೂನಿಯರ್ ಗಾಂಧಿ ಆಕಾಶ ನೋಡುತ್ತಿದ್ದ. ಮಳೆಯಾವಾಗ ಬರುತ್ತದೆ ಎಂಬುದು ಆತನ ಚಿಂತೆಗೆ ಕಾರಣವಾಗಿರಲಿಲ್ಲ. ಆದರೆ, ತನ್ನನ್ನು ಕರೆಯುವವರೇ ಇಲ್ಲವಲ್ಲ ಎಂಬುದು ಕಾಂಡಕೊರಕ ಹುಳುವಿನಂತೆ ಮನಸ್ಸನ್ನು ಕೊರೆಯುತ್ತಿತ್ತು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿ, ಜೀವತೆತ್ತ ತಾತನ ಕುರಿತ ಗೌರವ ಜನರಲ್ಲಿ ಕಡಿಮೆಯಾಗುತ್ತಿದೆ ಎಂಬದು ಗಮನಕ್ಕೆ ಬಂದಿತ್ತಾದರೂ ಇಷ್ಟು ಬೇಗ, ಇಂಡಿಯಾ ದೇಶದ ಜನ ಮಹಾತ್ಮನನ್ನು ಮರೆಯಬಹುದು ಎಂದುಕೊಂಡಿರಲಿಲ್ಲ. ಮೊದಲೆಲ್ಲ ತುಂಬಾ ಬಿಝಿಯಾಗಿರುತ್ತಿದ್ದ ಚೋಮ, ಈಗ ಅಗಸ್ಟ್-15, ಜನವರಿ-26, ಅಕ್ಟೋಬರ್-2 ಬಂದರೂ ತೂಕಡಿಸುತ್ತ ಮನೆಯಲ್ಲಿ ತತ್ತಿಯಿಡುತ್ತಿದ್ದ. ಗಾಂಧಿ ಜಯಂತಿ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ದಿನದಂದೂ ಸಂಘ-ಸಂಸ್ಥೆಗಳಾಗಲಿ, ಜನರಾಗಲಿ ಆತನ ಡೇಟ್ ಕೇಳುವುದನ್ನು ಬಿಟ್ಟುಬಿಟ್ಟಿದ್ದರು. ಗಾಂಧಿ ಕುರಿತು ಗಂಭೀರ ಅಭ್ಯಾಸದಲ್ಲಿ ನಿರತವಾಗಿದ್ದ ಗಾಂಧಿ ಸ್ಮಾರಕ ಭವನಗಳಿಗೆ ಅವನು ಎಂದಿಗೂ ಬೇಕಾಗಿರಲಿಲ್ಲ.
62 ರ ಚೋಮನಿಗೆ ಈ ಹವ್ಯಾಸ ಹತ್ತಿದ್ದು 40 ದಾಟಿದ ಮೇಲೆ. ಆಕಸ್ಮಿಕವಾಗಿ. ಸ್ಕೂಟರ್ ನಲ್ಲಿ ಹೋಗುತ್ತಿರಬೇಕಾದರೆ, ರೋಡ್ ರೇಜ್ ವೊಂದನ್ನು ನೋಡಿದ. ಜಗಳ ಬಿಡಿಸಲು ಬುದ್ಧಿವಾದ ಹೇಳತೊಡಗಿದಾಗ ಅಪಘಾತ ಮಾಡಿದ್ದ ಕಾಲೇಜು ಕುವರ, “ನೀವು ಸುಮ್ಮನಿರ್ರೀ” ಎಂದು ದಬಾಯಿಸಿದ್ದರೂ ಚೋಮ ಮಧ್ಯಪ್ರವೇಶಿಸುತ್ತಲೇ ಇದ್ದ. ಕಾಲೇಜು ಕುವರನ ಸಿಟ್ಟು ನೆತ್ತಿಗೇರಿ ಚೋಮನ ಕಪಾಳಕ್ಕೆ ಬಿಗಿದೇ ಬಿಟ್ಟ. ಸರ್ರಂತ ಚೋಮನ ಸಮಾಜ ಸೇವೆ ನಿಂತುಬಿಟ್ಟಿತು. ಆದರೂ ಕುವರನನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಎಂಬುದನ್ನು ನೆನೆಸಿಕೊಂಡು ಮತ್ತೊಂದು ಕೆನ್ನೆ ತೋರಿಸಿದ. ಕುವರನಿಗೆ ಇದು ತಮಾಷೆಯಾಗಿತ್ತು. ಮತ್ತೊಂದು ಕೆನ್ನೆಗೂ ಜೋರಾಗಿ ಬಿಗಿದ. ಚೋಮ ಸುಸ್ತಾಗಿ ಜಾಗ ಖಾಲಿ ಮಾಡಿದ. ಕೆಲ ದಿನಗಳ ನಂತರ ಆ ಘಟನೆಯನ್ನೇ ಮರೆತುಬಿಟ್ಟ. ಆದರೆ ಹೊಡೆಸಿಕೊಂಡ ಕೆನ್ನೆ ತನ್ನ ಕೋಪವನ್ನು ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಹಲ್ಲುಗಳ ಮೇಲೆ ತೋರಿಸಿತು. ಚೋಮ ತನ್ನ ಅಳಿದುಳಿದ ಹಲ್ಲುಗಳನ್ನು ತೆಗೆಸಿಕೊಂಡು ಡೆಂಚರ್ ಹಾಕಿಸಿಕೊಳ್ಳಬೇಕಾಯಿತು. ಇಂತಿಪ್ಪ ಸನ್ನಿವೇಶದಲ್ಲಿ ಆಫೀಸಿನಲ್ಲಿ ಯಾವುದೋ ಕಾರಣಕ್ಕೆ ಡೆಂಚರ್ ತೆಗೆದಿದ್ದಾಗ, ಪಕ್ಕದ ಟೇಬಲ್ಲಿನ ನಟಭಯಂಕರ, ನಟಸಾಮ್ರಾಟ, ನಟಚಕ್ರವರ್ತಿ ನಟೇಶ್ ಕುಮಾರ್, “ಮಿ. ಚೋಮ, ಹಿಂಗ್ ಹೇಳ್ತೆನಪಾ ಅಂತ ತ್ಯಪ್ ತಿಳ್ಕೋಬ್ಯಾಡ್ರೀ, ಖರೆ ನೀವ್ ನಿಮ್ಮ ಹಲ್ ಸೆಟ್ ತಗದಾಗ, ಅಗದೀ ಥೇಟ್ ಬರೋಬರ್ ಗಾಂಧಿ ಮುತ್ಯಾನಂಗ ಕಾಣ್ತೇರ್ ನೋಡ್ರಪಾ. ಅಂದ್ಹಂಗ, ನಾವ್ ಬರೋ ಅಕ್ಟೋಬರ್ ಯಾಡಕ್ಕ ಒಂದ್ ಹೊಸ ನಾಟ್ಕ ಆಡಾಕಹತ್ತೇವಿ. ‘ಹೇ ರಾಮ್ – ಹೇ ಅಲ್ಲಾ’ ಅಂತ. ನೀವ್ ಯಾಕ ನಮ್ಮ್ ನಾಟಕದಾಗ ಪಾಲ್ಟ್ ಮಾಡ್ಬಾರ್ದೂ…..”ಅಂತ ಅರ್ಜಿ ಗುಜರಾಯಿಸಿದ.
ಆಗಲೇ ಆತನ ಬದುಕು ಬದಲಾಗಿದ್ದು. ನಾಟಕದಲ್ಲಿ ಸುಡುಗಾಡು ಒಂದು ಡೈಲಾಗೂ ಇರಲಿಲ್ಲ. ಚೌಕದ ಬಳಿ ಗಾಂಧಿ ಪ್ರತಿಮೆಯೊಂದನ್ನು ನಿಲ್ಲಿಸಿರುತ್ತಾರೆ. ಆ ಪ್ರತಿಮೆಯ ಸುತ್ತಲೂ ಮದ್ಯಸೇವನೆ, ವೇಶ್ಯಾವಾಟಿಕೆ ಎಲ್ಲ ನಡೆಯುತ್ತಿರುತ್ತದೆ. ಪ್ರತಿಮೆ ನಿಲ್ಲಿಸುವ ಬದಲು ನಟೇಶ್ ಕುಮಾರ್, ಚೋಮನಿಗೆ ಗಾಂಧಿ ವೇಷ ಹಾಕಿ ಬರೋಬರಿ ಒಂದೂವರೆ ಗಂಟೆ ನಿಲ್ಲಿಸಿಬಿಟ್ಟಿದ್ದ. ವಾರಾಂತ್ಯದ ಪುರವಣಿಗಳ ನಾಟಕದ ವಿಮರ್ಶೆಗಳಲ್ಲಿ ‘ಇಡೀ ನಾಟಕದಲ್ಲಿ ಚೋಮನನ್ನು ಹೊರತು ಪಡಿಸಿ ಮತ್ತೆಲ್ಲ ಕೆಟ್ಟದಾಗಿತ್ತು’ ಎಂದು ಷರಾ ಬರೆಯಲಾಗಿತ್ತು. ಚೋಮನ ಡಬಲ್ ಕಾಲಂ ಫೋಟೋ ಹಾಕಲಾಗಿತ್ತು. ಇದಾದ ಮೇಲೆಯೇ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು,
ಎನ್ ಜಿ ಓ ಗಳು, ಮಹಿಳಾ ಮಂಡಳಗಳು, ಶಾಲಾ-ಕಾಲೇಜುಗಳು, ಇಲಾಖೆಗಳು, ಚೋಮನಿಗೆ ಗಾಂಧಿ ವೇಷ ಹಾಕಿ ತಮ್ಮ ಸಭೆಗಳಿಗೆ ಬರುವಂತೆ ಮನವಿ ಸಲ್ಲಿಸಲಾರಂಭಿಸಿದರು. ಮೊದಮೊದಲು ಹವ್ಯಾಸ ಎಂದು ಆರಂಭಗೊಂಡದ್ದು ವೃತ್ತಿಯೇ ಆಗಿಹೋಯಿತು. ಎಷ್ಟರಮಟ್ಟಿಗೆಯೆಂದರೆ, ಚೋಮ ತಾನು ಕೆಲಸ ಮಾಡುತ್ತಿದ್ದ ಕಾನೂನು ಮಾಪನಶಾಸ್ತ್ರ ಇಲಾಖೆಯ ಗುಮಾಸ್ತನ ಕೆಲಸ ಬಿಟ್ಟು ಇದೇ ಕಾಯಕವನ್ನು ಮುಂದುವರೆಸಿದ. ಸಮಾರಂಭಗಳಲ್ಲಿ ಕರೆದಾಗ ಚೋಮ, ಕಲ್ಕತ್ತಾದಿಂದ ತರಿಸುತ್ತಿದ್ದ ಬೆಳ್ಳಿ ಬಣ್ಣವನ್ನು ಮೈ ಪೂರ್ತಿ ಬಳಿದುಕೊಂಡು, ಕಾಲಿಗೆ ಹವಾಯಿ ಚಪ್ಪಲಿ, ಕಣ್ಣಿಗೆ ವೃತ್ತಾಕಾರದ ಕನ್ನಡಕ, ಸೊಂಟಕ್ಕೆ ಗಡಿಯಾರ, ಕೈಯಲ್ಲಿ ಕೋಲು ಹಿಡಿದು, ಬೋಳು ತಲೆಯೊಂದಿಗೆ ಪ್ರತ್ಯಕ್ಷನಾಗಿಬಿಡುತ್ತಿದ್ದ. ಆತ ಎಷ್ಟರಮಟ್ಟಿಗೆ ಗಾಂಧಿಯನ್ನು ಹೋಲುತ್ತಿದ್ದನೆಂದರೆ, ನಿಜವಾದ ಗಾಂಧಿಯನ್ನು ಕಂಡಿದ್ದ ಸ್ವಾತಂತ್ರ್ಯ ಹೋರಾಟಗಾರರು ಗಾಂಧಿಯ ವೇಷ ಧರಿಸಿದ್ದ ಚೋಮನನ್ನು ನೋಡಿ, ಭಾವುಕರಾಗಿ ಆತನ ಕಾಲಿಗೆರಗುತ್ತಿದ್ದರು.
ಕೆಲವೇ ವರ್ಷಗಳ ಹಿಂದೆ ಚೋಮ ಸಿನಿಮಾ ಹಿರೋಗಳಂತೆ ಕಾಲ್ ಶೀಟ್ ನೀಡುತ್ತಿದ್ದ. ಆತನ ಲಭ್ಯತೆಯ ಆಧಾರದ ಮೇಲೆ ಕಾರ್ಯಕ್ರಮಗಳ ದಿನಾಂಕ ನಿಗದಿಯಾಗುತ್ತಿದ್ದವು. ಗಾಂಧಿಯಂತೆ ಕೋಲು ಹಿಡಿದು ನಿಲ್ಲುವುದು ಬೋರ್ ಎನ್ನಿಸತೋಡಗಿದಾಗ, ಗಾಂಧಿಜೀ ಹೇಳಿದ ಮಾತುಗಳನ್ನು ಉರುಹೊಡೆದು ಸಭೆಗಳಲ್ಲಿ ಹೇಳಲಾರಂಭಿಸಿದ. ಹಲವೆಡೆ ಸ್ವಾಗತ ಗೀತೆಯನ್ನು ರದ್ದು ಮಾಡಿ ಚೋಮನಿಂದ ಡೈಲಾಗ್ ಹೇಳಿಸಿ, ಕಾರ್ಯಕ್ರಮ ಆರಂಭಿಸುವ ಪದ್ಧತಿ ಜಾರಿಗೆ ಬಂದಿತ್ತು. ಹೀಗೆ ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದಂತೆ ವೈಭವದಿಂದ ಬಾಳಿದ್ದವನಿಗೆ ಈಗ ಎರಡು ಹೊತ್ತು ಕೂಳಿಗೂ ಪರದಾಡಬೇಕಾದ ಪರಿಸ್ಥಿತಿಯಿತ್ತು.
“ಅದ್ಯೇನಣ್ಣ, ಪ್ರತಿ ಸಾರ್ತಿನೂ ಮಾಂಸ ಇಲ್ಲದ ಗಾಂಧಿನ್ನೇ ಕರ್ಸಾದು…ಪಿಲ್ಮ್ ಸ್ಟಾರ್ ಉಪೇಂದ್ರನ್ ಪಾಲ್ಟ್ ಮಾಡೋ ಜೂನಿಯರ್ ಮಂಜನ್ ಕರ್ಸಿದ್ರೆ ಜನಕ್ ಎಂಟೆನ್ ಮೆಂಟ್ ಆದ್ರೂ ಆಯ್ತದೆ, ಬೇಕಾದ್ರೆ, ಜೂನಿಯರ್ ಮಂಜನ್ನ ಕೈಲೇ ಗಾಂಧಿ ಡೈಲಾಗ್ ಹೇಳ್ಸಾಣ. ಅದೂ ಒಂತರಾ ಡಿಪರೆಂಟ್ ಆಗಿರ್ತೈತೆ” ಎನ್ನುವ ಅಭಿಪ್ರಾಯಗಳೇ ಬರತೊಡಗಿ ಚೋಮನಿಗೆ ಡಿಮ್ಯಾಂಡ್ ಕುಸಿಯತೊಡಗಿತು.
ಬೇಡಿಕೆ ಬರುತ್ತಿದ್ದರೂ, ವಿಚಿತ್ರ ಕಂಡೀಷನ್ ಗಳು ಚೋಮನನ್ನು ಹೈರಾಣ ಮಾಡುತ್ತಿದ್ದವು. ‘ಗಾಂಧಿಯ ಡ್ರೆಸ್ ಹಾಕಿ, ಆದರೆ ಡೈಲಾಗ್ ಮಾತ್ರ ನಾನಾ ಪಾಟೇಕರ್ ನ ಏಕ್ ಮಚ್ಛರ್ ಆದ್ಮೀಕೋ ಹಿಚಡಾ ಬನಾ ದೇತಾ ಹೈ….ಹೇಳಿ’, ‘ಬೀಟಲ್ಸ್ ನ ಸಂಗೀತಕ್ಕೆ ಹೆಜ್ಜೆ ಹಾಕಿ’, ‘ಸ್ಟೇಜ್ ಮೇಲೆ ಎಲ್ಲರಿಗೂ ಫ್ಲೈಯಿಂಗ್ ಕಿಸ್ ಕೊಡಿ’ ಎಂಬಿತ್ಯಾದಿ ತಾತನ ವ್ಯಕ್ತಿತ್ವವನ್ನು ತೇಜೋವಧೆ ಮಾಡುವ ಬೇಡಿಕೆಗಳೇ ಬರುತ್ತಿದ್ದವು. ಇವಕ್ಕೆಲ್ಲ ಇಲ್ಲವೆನ್ನಲಾಗಿ, ಆತನ ಜನಪ್ರೀಯತೆ ಕುಗ್ಗುತ್ತ ಹೋಯಿತು. ಅಷ್ಟೇ ಅಲ್ಲ, ‘ಜೂನಿಯರ್ ಗಾಂಧಿಗೆ ಈಗ ಗಾಂಚಾಲಿ ಅಂತೆ’ ಎಂಬ ಮಾತೂ ಹುಟ್ಟಿಕೊಂಡಿತು.
ಹೀಗಾಗಿ ಚೋಮ ತಲೆ ಮತ್ತು ಪಿರ್ರೆಯನ್ನು ಒಟ್ಟೊಟ್ಟಿಗೆ ಕೆರೆದುಕೊಳ್ಳುತ್ತ ಆಕಾಶ ನೋಡುತ್ತಿದ್ದ.
ಆದರೆ ಬದುಕು ನೋಡಿ, ಈಗಿರುವುದು ಮತ್ತೊಂದು ಕ್ಷಣ ಇರುವುದಿಲ್ಲ. ಬದಲಾಗುತ್ತಿರುತ್ತದೆ. ಗೋಸುಂಬೆಯ ಹಾಗೆ.
ಸೊಂಯ್ಯ್ ಎಂದು ಕಿಂಚಿತ್ತೂ ಶಬ್ದ ಮಾಡದೆ ಭಾರೀ ಕಾರೊಂದು ಚೋಮನ ಮನೆಯ ಮುಂದೆ ನಿಂತಿತು. ಮುಂದಿನ ಸೀಟ್ ನಿಂದ ಇಳಿದದ್ದು ಉದಯ ದೊಡ್ಡಬೊಮ್ಮಣ್ಣವರ್, ಪರ್ಸನಲ್ ಸೆಕ್ರೆಟರಿ ಟು ಶಿವಾನಂದ ಕರನಿಂಗ್, ಅಧ್ಯಕ್ಷರು, ಇಂಡಿಯನ್ ಪಬ್ಲಿಕ್ ಪಾರ್ಟಿ. ಆತ ಕೆಳಗಿಳಿಯುತ್ತಿದ್ದಂತೆ ಮರದ ಮೇಲಿದ್ದ ಕಾಗೆಯೊಂದು ವಿಕಾರವಾಗಿ ಕಿರುಚಿಕೊಂಡಿತು.
ಕರಟಕನ ಪೋಸ್ ಕೊಡುತ್ತ ಬಂದು, ಸಿಕ್ಕಾಪಟ್ಟೆ ನಗೆ ಬೀರುತ್ತ ಸೀದಾ ಚೋಮನ ಕಾಲಿಗೆರಗಿದ.
“ಹ್ಹೆ..ಹ್ಹೆ…ಇದೇನು ಮಾಡ್ತೀದಿರೀ..ಬೇಡ..ಬೇಡ”
“ಅಯ್ಯೋ…ತಾವು ಮಹಾತ್ಮ. ತಮ್ಮನ್ನು ನೋಡಿದರೆ ಸಾಕ್ಷಾತ್ ಆ ಮಹಾತ್ಮನನ್ನು ನೋಡಿದಂತೆ ಆಗುತ್ತದೆ ನೋಡಿ” ಎಂದು ಉದಯ ಜಗುಲಿಯ ಮೇಲೆ ಕುಳಿತ.
ಯಾವ ಪ್ರಸ್ತಾವನೆಯಿಲ್ಲದೆ 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದಾಗಿನಿಂದ 1947 ಹಾಗೂ ಅದರ ನಂತರದಿಂದ ಇಂದಿನವರೆಗಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ತಿಕ ಒಂದನ್ನು ಬಿಟ್ಟು ಅಂತ್ಯದಲ್ಲಿ ‘ಕ’ ಅಕ್ಷರದಿಂದ ಕೊನೆಗೊಳ್ಳುವ ಎಲ್ಲದರ ಕುರಿತು ಬಿಟ್ಟೂ ಬಿಡದೆ ಕೊರೆದ. ಭೋಳೆ ಶಂಕರನ ಅಪರವಾವತಾರನಾಗಿದ್ದ ಚೋಮ ಆಸ್ಥೆಯಿಂದ ಕೇಳುತ್ತಿದ್ದ. ಅಂತೂ ದೊಡ್ಡಬೊಮ್ಮಣ್ಣವರ್ ಮಾತು ಮುಗಿಸಿ, “ನಿಮ್ಮನ್ನು ಸಾಹೆಬ್ರು ನೋಡ್ಬೇಕಂತೆ. ನಾಳೆ ಬೆಳಿಗ್ಗೆ 10 ಗಂಟೆಗೆ. ಸಾಹೇಬ್ರ ಮನೆಗೆ ಬರಲು ನೀವೇನೂ ತೊಂದರೆ ತೆಗೆದುಕೊಳ್ಳಬೇಡಿ. ಕಾರ್ ಒಂಬೂತ್ತೂಕಾಲಿಗೆ ನಿಮ್ಮ ಮನೆಗೆ ಬರುತ್ತದೆ” ಎಂದು ತಶರೀಫ್ ಎತ್ತಿಕೊಂಡು ಕಾರಿನಲ್ಲಿ ತೂರಿಸಿದ. ಕಾಗೆ ಮತ್ತೊಮ್ಮೆ ವಿಕಾರವಾಗಿ ಕಿರುಚಿತು.
ಕರನಿಂಗ್ ಸಾಹೇಬ್ರು ತನ್ನನ್ನೇಕೆ ಕರೆದಿರಬಹುದೆಂಬ ಯೋಚನೆಯಲ್ಲಿ ರಾತ್ರಿಯೆಲ್ಲ ಕಳೆದ ಚೋಮ, ಬೆಳಿಗ್ಗೆ ಎಂಟುಗಂಟೆಗೆಲ್ಲ ತಯಾರಾಗಿ ಕಾಯುತ್ತ ಕುಳಿತ. ಸರಿಯಾಗಿ ಒಂಬತ್ತೂಕಾಲಿಗೆ ಬೆಳ್ಳಿ ಬಣ್ಣದ ಕಾರ್ ಬಂದಿತು. ಚೋಮ, ಕರನಿಂಗ್ ರ ಅರಮನೆ ತಲುಪಿದಾಗ ಸಾಹೇಬರನ್ನು ನೋಡಲು ಪಂಚಾಯ್ತಿ ಮೆಂಬರ್ ಗಳು, ಲೋಕಲ್ ಗೂಂಡಾಗಳು, ಛಪ್ಪನ್ನೈವತ್ತಾರು ಪಾರ್ಟಿ ಬದಲಾಯಿಸಿ ಇಂಡಿಯನ್ ಪಬ್ಲಿಕ್ ಪಾರ್ಟಿ ಸೇರಲು ಹಾತೊರೆಯುತ್ತಿದ್ದ ಖದೀಮರು, ಹೀಗೆ ತರಹೇವಾರಿ ಜನರು ಗುಂಪುಗುಂಪಾಗಿ ನಿಂತಿದ್ದರು. ಕೆಲ ಹೊತ್ತಿನಲ್ಲಿ ಕರನಿಂಗ್ ಸಾಹೇಬರು ಗುಡಾಣದಂತಹ ಹೊಟ್ಟೆ ಹೊತ್ತುಕೊಂಡು ಬಸುರಿ ಹೆಂಗಸಿನಂತೆ ನಡೆಯುತ್ತ ಚೇಂಬರ್ ಹೊಕ್ಕರು.
ತಕ್ಷಣ ದೊಡ್ಡಬೊಮ್ಮಣ್ಣವರ್ ಚೋಮನನ್ನು ಸಾಹೇಬರ ಬಳಿ ಕರೆದುಕೊಂಡು ಹೋಗಿದ್ದು, ಅಲ್ಲಿದ್ದವರ ಹುಬ್ಬೇರಿಸಿತು. ಚೋಮ ಚೇಂಬರ್ ಹೊಕ್ಕಾಗ ಹತ್ತೂವರೆ. ರಾಹುಕಾಲ ಜಸ್ಟ್ ಆರಂಭವಾಗಿತ್ತು. “ಬನ್ನಿ..ಬನ್ನಿ.. ಮಿ. ಸೋಮಶೇಖರ್. ಹೇಗಿದ್ದೀರಿ? ಆರೋಗ್ಯ ತಾನೆ? ನೀವು ಹಿರಿಯರು. ನಾನೇ ನಿಮ್ಮ ಮನೆಗೆ ಬರಬೇಕೆಂದಿದ್ದೆ. ಆದರೆ ಕೆಲಸದ ಒತ್ತಡ ನೋಡಿ. ನಿಮ್ಮನ್ನೇ ಕರೆಸಿಕೊಂಡೆ. ತಪ್ಪು ತಿಳ್ಕೋಬೇಡಿ” ಎಂದು ಕರನಿಂಗ ಪೀಠಿಕೆ ಹಾಕಿದ.
ನಂತರ ನೇರವಾಗಿ ವಿಷಯ ಮುಂದಿಟ್ಟ. “ನೋಡಿ, ಬೈಇಲೆಕ್ಸನ್ ಬರ್ತಾ ಇರೋದು ಗೊತ್ತೇ ಇದೇ. ನಮ್ಮ ಪಾರ್ಟಿ ಮೊದಲಿನಿಂದಲೂ ಗಾಂದೀಜಿಯ ಥತ್ವ, ಆದರ್ಸ ಹಾಗೂ ಸಿಂತನೆಗಳನ್ನೇ ಪಾಲಿಸಿಕೊಂಡು ಬರುತ್ತಿರುವುದೂ ನಿಮಗೆ ಗೊತ್ತಿದೆ. ನಮ್ಮ ಪಾರ್ಟಿ ಕ್ಯಾಂಡಿಡೇಟ್ ಮಾಲಕೊಂಡ ರೆಡ್ಡಿ. ತುಂಬಾ ಸಜ್ಜನರು. ಗಾಂದೀಜಿಯ ಉಪದೇಸಗಳೆಂದರೆ ಪಂಚಪ್ರಾಣ. ಯಾವಾಗಲೂ ಮಹಾತ್ಮನ ಆದರ್ಸಗಳನ್ನು ಪಾಲಿಸಬೇಕು ಎಂದು ಸಿಕ್ಕಸಿಕ್ಕ ಕಡೆಯೆಲ್ಲ ಕರೆ ಕೊಡುತ್ತಲೇ ಇರುತ್ತಾರೆ. ಈ ಬಾರಿ ಚುನಾವಣೆಯಲ್ಲಂತೂ ಅವರ ಗೆಲವು ಸೂರ್ಯನ ಹಾಗೆ ಸ್ಪಸ್ಟ. ಆದರೂ ಮನುಸ್ಯ ಪ್ರಯತ್ನ ಬೇಕಲ್ಲವೆ? ಹಾಗಾಗಿ ಭರಪೂರ ಕ್ಯಾನ್ವಾಸಿಂಗ್ ಮಾಡ್ತಾ ಇದ್ದೇವೆ” ಎಂದು ಹೇಳಿ ದೊಡ್ಡಬೊಮ್ಮಣ್ಣನವರ್ ಗೆ ಮಾಲಕೊಂಡ ರೆಡ್ಡಿಯನ್ನು ಒಳಕಳಿಸುವಂತೆ ಸೂಚಿಸಿದ.
ರೆಡ್ಡಿ ಬಂದವನೇ ಸೀದಾ ಚೋಮನ ಕಾಲಿಗೆರಗಿದ. ಎರಡೂ ಕೈ ಬೆರಳುಗಳಿಗೆ ಹರಳುಗಳುಳ್ಳ ಉಂಗುರಗಳು, ಕೊರಳಲ್ಲಿ ನಾಯಿಯ ಸರಪಳಿಯಷ್ಟೇ ದಪ್ಪವಾಗಿದ್ದ ಬಂಗಾರದ ಚೈನು, ಕೈಗೆ ಅಷ್ಟೇ ದಪ್ಪಗಿದ್ದ ಬ್ರೇಸ್ಲೆಟ್, ರಿಸ್ಟ್ ವಾಚ್, ರೆಡ್ಡಿಯ ಕಪ್ಪು ಮೈ ಮೇಲೆ ವಿಚಿತ್ರವಾಗಿ ಅಲಂಕೃಗೊಂಡಿದ್ದವು. ರೆಡ್ಡಿ ರಿಯಲ್ ಎಸ್ಟೆಟ್ ಕುಳ ಎಂದು ತಕ್ಷಣ ಗೊತ್ತಾಗುತ್ತಿತ್ತು. ರೆಡ್ಡಿಯ ದೇಹವನ್ನು ಉದ್ದುದ್ದ-ಅಡ್ಡಡ್ಡ ಸೀಳಿದರೆ ಗಾಂಧಿ ಆದರ್ಶಗಳು ಹೋಗಲಿ, ಗಾಂಧಿಯ ಹೆಸರು ಕೂಡ ಸಿಗುವುದಿಲ್ಲ ಎಂದು ಚೋಮ ಮನಸ್ಸಿನಲ್ಲಿಯೇ ಅಂದುಕೊಂಡ.
ಕರನಿಂಗ್ ಮುಂದುವರೆಸಿದ.
“ಚೋಮ ಅವರೆ, ಪ್ರಚಾರಕ್ಕಾಗಿ ಎಲ್ಲ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದೇವೆ. ಹಾಡು, ಡ್ಯಾನ್ಸು, ಜಾನಪದ ಕಲೆ, ಸಿಡಿ, ವಿಡಿಯೋ, ಇಂಟರ್ನೆಟ್, ಮೊಬೈಲ್. ಇದರ ಜೊತೆ ನಮ್ಮ ಹೈಕಮಾಂಡ್ ತನ್ನ ಆಸೆಯೊಂದನ್ನು ಮುಂದಿಟ್ಟಿದೆ. ಅದರಂತೆ ತಾವು ನಮ್ಮ ಪರವಾಗಿ ಅಂದರೆ ಕ್ಯಾಂಡಿಡೇಟ್ ರೆಡ್ಡಿಯವರ ಪರವಾಗಿ ಕ್ಯಾಂಪೇನ್” ಮಾಡಬೇಕು ಎಂದು ಹಾವು ಬಿಟ್ಟ.
ಚೋಮ ಮೇಲೆ ಕೆಳಗೆ ನೋಡಲಾರಂಭಿಸಿದ. ಆತನ ಮೌನವನ್ನು ನೋಡಿದ ರೆಡ್ಡಿ ಬಾಯಿ ತೆರೆದ. “ಸರ್, ಕ್ಯಾಂಪೇನಿಂಗ್ ಅಂದರೆ ಹೆಚ್ಚೆನೂ ಇಲ್ಲ. ನೀವು ಹೇಗೂ ಗಾಂಧಿ ವೇಷ ಹಾಕುತ್ತೀರಿ. ಈಗಲೂ ಸಹ ಗಾಂಧಿ ವೇಷ ಹಾಕಿ ಕೆಲವು ಸ್ಥಳಗಳಿಗೆ ಹೋಗಿ ಸಾರ್ವಜನಿಕ ಸಭೆಗಳನ್ನುದ್ದೇಶಿ ಮಾತನಾಡಬೇಕು. ಭಾಷಣದಲ್ಲಿ ನಿಮ್ಮ ಅಂದರೆ ಗಾಂಧಿ ತತ್ವಗಳು ಹೇಗೆ ಹಳ್ಳ ಹಿಡಿಯುತ್ತಿವೆ. ಗಾಂಧಿಯ ಇಂದಿನ ಪ್ರಸ್ತುತೆ ಏನು. ಇಂಡಿಯನ್ ಪಬ್ಲಿಕ್ ಪಾರ್ಟಿ ಅಧಿಕಾರಕ್ಕೆ ಬಂದರೆ ಗಾಂಧಿಯ ತತ್ವಗಳನ್ನು ಹೇಗೆ ಪಾಲಿಸಲಿದ್ದೇವೆ ಎಂದೆಲ್ಲ ಜನರಿಗೆ ಮನವರಿಕೆ ಮಾಡಿಕೊಡಬೇಕು. ನಿಮ್ಮ ಓಡಾಟದ ಖರ್ಚನ್ನೆಲ್ಲ ನೋಡಿಕೊಳ್ಳುತ್ತೇವೆ. ಅಷ್ಟೇ ಅಲ್ಲ ದಿನಕ್ಕೆ 25 ಸಾವಿರ ರೂಪಾಯಿ ನೀಡುತ್ತೇವೆ” ಎಂದು ಚೋಮನ ಮುಖ ನೋಡಿದ.
ಒಂದು ಕಾರ್ಯಕ್ರಮಕ್ಕೆ ಗರಿಷ್ಠವೆಂದರೆ ಮೂರುಸಾವಿರ ರೂಪಾಯಿ ತೆಗೆದುಕೊಂಡಿದ್ದವನಿಗೆ ದಿನಕ್ಕೆ 25 ಸಾವಿರ ರೂಪಾಯಿ ಆಕರ್ಷಕವಾಗಿತ್ತು. ಗಾಂಧಿಯ ಡೈಲಾಗ್ ಹೊಡೆಯಲು ಗಾಂಧಿ ಸಾಹಿತ್ಯ ಅಧ್ಯಯನ ಮಾಡಿದ್ದನಾದ್ದರಿಂದ ಗಾಂಧಿ ಕುರಿತು ಹೇಳಿ, ಬಳಿಕ ರೆಡ್ಡಿ ಪರವಾಗಿ ಮತ ಯಾಚಿಸುವುದು ಕಷ್ಟದ ಕೆಲಸವೆನೂ ಅನ್ನಿಸಲಿಲ್ಲ. ತನ್ನ ನಿರುದ್ಯೋಗವನ್ನು ನೆನೆಸಿಕೊಂಡವನೇ ತಕ್ಷಣ ಒಪ್ಪಿದ.
ಇಲೆಕ್ಷನ್ ನಲ್ಲಿ ಒಂದು ಸೀಟು ಹೆಚ್ಚು ಕಡಿಮೆಯಾದರೂ ಸರ್ಕಾರ ಬೀಳುವ ಸಂಭವವಿತ್ತಾದ್ದರಿಂದ ಪಕ್ಷಗಳು ತಮ್ಮ ತನು-ಮನ ಹಾಗೂ ಧನ ಮತ್ತು ಧನ ಮತ್ತು ಧನವನ್ನು ನೀರಿನಂತೆ ಹರಿಸುತ್ತಿದ್ದವು.
ಚೋಮನನ್ನು ಪ್ರಚಾರಕ್ಕೆಳೆಯಲು ಕಾರಣವಾಗಿದ್ದು ವಿಧಾನ ಸಭಾ ಕ್ಷೇತ್ರ. ಮತದಾರ ಲಿಸ್ಟ್ ನೋಡಿದ್ದ ಕರನಿಂಗನಿಗೆ ಈ ಚುನಾವಣೆಯನ್ನು ವಿಭಿನ್ನವಾಗಿ ಎದುರಿಸಬೇಕೆಂದು ಹೊಳೆದುಹೋಗಿತ್ತು. ಕಾರಣ, ಮುಂದುವರೆದವರು, ಹಿಂದೆಉಳಿದವರು, ಮಧ್ಯೆ ಇರುವವರು, ಪಕ್ಕಕ್ಕಿರುವವರು, ಬಲಕ್ಕಿರುವವರು, ಎಡಕ್ಕಿರುವವರು ಹೀಗೆ ಮತದಾರರ ಜಾತಿಗಳು ಹರಿದುಹಂಚಿಹೋಗಿದ್ದವು. ಹೇಗೆ ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿದರೂ ಒಂದೇ ಜಾತಿಯನ್ನು ಯಾಮಾರಿಸಿ ಚುನಾವಣೆ ಗೆಲ್ಲುವುದು ಸಾಧ್ಯವಿರಲಿಲ್ಲ. ಎಲ್ಲರನ್ನೂ ಸೆಳೆಯುವ ವ್ಯಕ್ತಿ ಬೇಕಾಗಿತ್ತು. ಜೂನಿಯರ್ ಗಾಂಧಿ ಒದಗಿಬಂದಿದ್ದ.
ಮಾರನೇ ದಿನದಿಂಲೇ ಜೂನಿಯರ್ ಗಾಂಧಿಯ ಕಾರು ಸುತ್ತಲಾರಂಭಿಸಿತು. ನಮ್ಮ ದೇಶ ಭಾರತ. ನಾವು ಭಾರತೀಯರು ಎಂದೆಲ್ಲ ಆರಂಭಿಸಿ ಸ್ವಾತಂತ್ರ್ಯ ಪಡೆಯಲು ತಾನು ಮಾಡಿದ ಹೋರಾಟಗಳನ್ನು ವರ್ಣಿಸಿ ಕಡೆಗೆ ತನ್ನ ಕಿಮ್ಮತ್ತನ್ನು ಏನಾದರು ಉಳಿಸಬೇಕು ಎಂದು ಮತದಾರರು ತೀರ್ಮಾನಿಸಿದ್ದರೆ ಅದನ್ನು ರೆಡ್ಡಿಗೆ ಮತ ಹಾಕುವುದರ ಮೂಲಕ ಮಾಡಬಹುದು ಎಂದು ಹೋದಕಡೆಯೆಲ್ಲ ಡಂಗುರಿಸಿದ.
ಸಾಮಾನ್ಯವೆಂಬಂತೆ ಆರಂಭವಾಗಿದ್ದ ಆತನ ಭಾಷಣ ತೀವ್ರವಾಗಹತ್ತಿತು. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಜೂನಿಯರ್ ಗಾಂಧಿ ಹೋದೆಡೆಯಲ್ಲೆಲ್ಲ ಭಾರೀ ಜನಸ್ತೋಮ. ಪತ್ರಿಕೆಗಳು ಜೂನಿಯರ್ ಗಾಂಧಿಯ ಫೋಟೋ ಸಮೇತ ಭಾಷಣವನ್ನು ವರದಿ ಮಾಡಲಾರಂಭಿಸಿದವು. ಟ್ವಿಟರ್, ಫೇಸ್ ಬುಕ್, ಬ್ಲಾಗ್-ಇಂಟರ್ನೆಟ್ನಲ್ಲಿ ಜೂನಿಯರ್ ಗಾಂಧಿಯದೇ ಚರ್ಚೆ. ರಾಷ್ಟ್ರೀಯ ಚಾನಲ್ ಒಂದರ ಷೋಡಶಿ ಪತ್ರಕರ್ತೆ ವಿಶೇಷ ವರದಿ ಮಾಡಿದಾಗಲಂತೂ ಜೂನಿಯರ್ ಗಾಂಧಿಯ ಪಾಪ್ಯುಲಾರಿಟಿ ಉತ್ತುಂಗಕ್ಕೇರಿತು. ರೆಡ್ಡಿ ಪರವಾಗಿ ವೇವ್ ಕ್ರಿಯೇಟ್ ಆಗಲಾರಂಭಿಸಿದೆ ಎಂದು ಗುಪ್ತಚರ ಮಾಹಿತಿ ಆಡಳಿತ ಪಕ್ಷವನ್ನು ತಲುಪಲಾರಂಭಿಸಿದವು. ತಮ್ಮದೇ ಲೆಕ್ಕಾಚಾರದ ಮೂಲಕ ಚುನಾವಣೆ ಗೆಲ್ಲಬಹುದು ಎಂದುಕೊಂಡಿದ್ದ ಆಡಳಿತ ಪಕ್ಷಕ್ಕೆ ಜೂನಿಯರ್ ಗಾಂಧಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಗತೊಡಗಿತು. ಇನ್ನು ಸುಮ್ಮನಿದ್ದರೆ, ಉಪಚುನಾವಣೆಯಲ್ಲಿ ನಾಮ ತಿಕ್ಕಿಕೊಳ್ಳಬೇಕಾಗುತ್ತದೆ ಎಂಬ ಅರಿವಾಗುತ್ತಲೇ ಆಡಳಿತ ಪಕ್ಷದವರು ಪ್ರತಿತಂತ್ರ ಹೆಣೆದರು.
ಜೂನಿಯರ್ ಗಾಂಧಿಯ ಪ್ರಭಾವ ಇಳಿಸಲು ಅದು ಆಯ್ದುಕೊಂಡಿದ್ದು ವಿಚಿತ್ರ ಹಾದಿಯನ್ನು. ಜೂನಿಯರ್ ಗಾಂಧಿ ಪಾಪ್ಯುಲರ್ ಆಗುತ್ತಿದ್ದಾನಲ್ಲವೆ. ಹಾಗಿದ್ದರೆ ನಿಜವಾದ ಗಾಂಧಿಯ ಪಾಪ್ಯುಲಾರಿಟಿ ಕಡಿಮೆ ಮಾಡಿದರೆ, ಜೂನಿಯರ್ ಗಾಂಧಿ ಬಾಯಿಬಾಯಿ ಬಡಿದುಕೊಳ್ಳಬೇಕಾಗುತ್ತದೆ ಎಂದು ತಲೆ ಮಾಸಿದ ರಾಜಕಾರಣಿಯೊಬ್ಬ ಸಲಹೆ ನೀಡುತ್ತಲೇ ತಕ್ಷಣ ಅದನ್ನು ಜಾರಿಗೆ ತರುವಂತೆ ಆಡಳಿತ ಪಕ್ಷದ ಅಧ್ಯಕ್ಷ ಶಿವಪೂಜಿಮಠ್ ಆದೇಶಿಸಿದ್ದ. ಹೀಗಾಗಿ ಹೋದೆಡೆಬಂದೆಡೆಯಲ್ಲೆಲ್ಲ “ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕೇವಲ ಗಾಂಧಿ ಮಾತ್ರವಲ್ಲ. ಮಹಾತ್ಮ ನೇತೃತ್ವ ವಹಿಸಿದ್ದನಷ್ಟೇ. ಚಂದ್ರಶೇಖರ್ ಆಝಾದ್, ಅಶ್ಫಾಕ್ ಉಲ್ಲಾಖಾನ್, ಭಗತ್ ಸಿಂಗ್, ರಾಮಪ್ರಸಾದ್ ಬಿಸ್ಮಿಲ್, ಮದನ್ ಲಾಲ್ ಧಿಂಗ್ರಾನಂತಹ ಕ್ರಾಂತಿಕಾರರು, ಸುಭಾಷರ್ ರಂತಹ ತೀವ್ರಗಾಮಿಗಳು ಇಲ್ಲದಿದ್ದಿದ್ದರೆ ಗಾಂಧಿಗೆ ಏನು ಮಾಡುವುದೂ ಸಾಧ್ಯವಾಗುತ್ತಿರಲಿಲ್ಲ. ಗಾಂಧಿ ಹೇಳಿದ್ದೊಂದು ಮಾಡಿದ್ದೊಂದು. ದೇಶವಿಭಜನೆ ನನ್ನ ಹೆಣದ ಮೇಲಾಗಲಿ ಎಂದು ಹೇಳುತ್ತಲೇ ದೇಶ ವಿಭಜನೆಗೆ ಮುಂದಾದರು. ದೇಶವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ಮನೆಮಠ ಕಳೆದುಕೊಂಡರು. ಹೆಂಗಸರನ್ನು ಮಾನಭಂಗಕ್ಕೀಡುಮಾಡಲಾಯಿತು. ಇದಕ್ಕೆಲ್ಲ ಗಾಂಧಿ ಹೊಣೆಯಲ್ಲವೆ? ಆತನ ಹಟಕ್ಕಾಗಿ ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ನೀಡಿದ್ದರಿಂದಲೇ ಇಂದು ಪಾಕಿಸ್ತಾನ ಮುಂಬೈ ಮೇಲಿನ ದಾಳಿಯಂತಹ ದುಸ್ಸಾಹಸ ಮಾಡಿದೆ. ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಗಾಂಧಿ, ಅದೇಕೆ ಹೆಣ್ಣುಮಕ್ಕಳ ಮೇಲೆ ಕೈಯಿಟ್ಟುಕೊಂಡು ನಡೆಯಬೇಕಿತ್ತು? ಅವರಿಗೆ ಗಂಡಸರು ಸಿಕ್ಕಿರಲಿಲ್ಲವೆ?” ಎಂದೆಲ್ಲ ಗಾಂಧಿಯ ಮೇಲಿರುವ ಓಬಿರಾಯನ ಕಾಲದ ಆರೋಪಗಳನ್ನೆಲ್ಲ ಜನರೆದರು ವಿವಿಧ ವೇದಿಕೆಗಳಲ್ಲಿ ಆಡಳಿತ ಪಕ್ಷದವರು ಇಡತೊಡಗಿದರು. ಒಂದು ಹಂತದಲ್ಲಿಯಂತೂ ಜೂನಿಯರ್ ಗಾಂಧಿಗೆ ವಿರುದ್ಧವಾಗಿ ಜೂನಿಯರ್ ಗೋಡ್ಸೆಯನ್ನು ತಂದು ಭಾಷಣ ಮಾಡಿಸಿದರೆ ಪರಿಣಾಮಕಾರಿಯಾಗಿರುತ್ತದೆ ಎಂಬ ಸಲಹೆಯೂ ಬಂತು. ಆದರೆ, ಇದು ಉಲ್ಟಾ ಹೊಡೆಯುವ ಸಾಧ್ಯತೆ ಇರುವುದರಿಂದ ಕೈಬಿಡಲಾಯಿತು.
ಏನೇ ತಿಪ್ಪರಲಾಗ ಹಾಕಿದರೂ ಜೂನಿಯರ್ ಗಾಂಧಿಯ ಅಬ್ಬರಕ್ಕೆ ಕಡಿವಾಣ ಹಾಕುವುದು ಸಾಧ್ಯವಾಗಲಿಲ್ಲ. ಬದಲಿಗೆ ಅದು ಮತ್ತಷ್ಟು ಹೆಚ್ಚುತ್ತಲೇ ಹೋಯಿತು. ಜೂನಿಯರ್ ಗಾಂಧಿ ರೆಡ್ಡಿ ಪರವಾಗಿ ವೇವ್ ಕ್ರಿಯೇಟ್ ಮಾಡುತ್ತಿದ್ದಾನೆ ಎಂದು ಇಂಟೆಲಿಜೆನ್ಸ್ ನವರು ಹೇಳುತ್ತಲೇ ಇದ್ದರು. ಇತ್ತೀಚೆಗಂತೂ ಜೂನಿಯರ್ ಗಾಂಧಿ ಇಬ್ಬರು ಹೆಣ್ಣುಮಕ್ಕಳ ಹೆಗಲ ಮೇಲೆ ಕೈಯಿಟ್ಟುಕೊಂಡು ಬಂದು ವೇದಿಕೆಯೇರತೊಡಗಿದ್ದ. ರಘುಪತಿ ರಾಘವ ಹಾಡಿ, ರೆಡ್ಡಿಗೆ ಮತಹಾಕುವಂತೆ ಆದೇಶ ಮಾಡುವ ಮಟ್ಟಕ್ಕೆ ಬೆಳೆದಿದ್ದ. ಆಡಳಿತ ಪಕ್ಷ ನೀರಿನಂತೆ ಹಂಚುತ್ತಿದ್ದ ಹಣ, ಹೆಂಡ, ಸೀರೆ, ಕುಪ್ಪಸ, ಧೋತರ, ಟಿವಿ, ಫ್ರಿಜ್ ಜೂನಿಯರ್ ಗಾಂಧಿಯ ಪಾಪ್ಯುಲಾರಿಟಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು.
ಮತದಾನ ಸಮೀಪಿಸುತ್ತಿತ್ತು. ಆಡಳಿತ ಪಕ್ಷ ಕೈ ಹಿಸುಕಿಕೊಳ್ಳುತ್ತಿತ್ತು. ಚುನಾವಣೆ ಸೋತರೂ ಪರವಾಗಿಲ್ಲ ಜೂನಿಯರ್ ಗಾಂಧಿಗೆ ಗತಿ ಕಾಣಿಸಬೇಕೆಂಬ ಹಟಕ್ಕೆ ಅದು ಬಿದ್ದುಬಿಟ್ಟಿತ್ತು.
ಇನ್ನೇನು ಮತದಾನಕ್ಕೆ ನಾಲ್ಕು ದಿನ ಎನ್ನಬೇಕಾದರೆ ಚೋಮ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಯಿತು. ಲಾರಿ ಹಾಗೂ ಇನ್ನೋವಾ ಮುಖಾಮುಖಿ ಡಿಕ್ಕಿಯಲ್ಲಿ ಇನ್ನೋವಾದ ಚಾಸಿಯನ್ನು ಗುರುತಿಸುವುದೇ ಕಷ್ಟವಾಗಿತ್ತು.
ಇದು ದುರುದ್ದೇಶಪೂರಿತ ಅಪಘಾತ ಎಂದು ಪ್ರತಿಪಕ್ಷ ತಕ್ಷಣ ಹುಯಿಲೆಬ್ಬಿಸಿತು. ಆದರೆ ಜೂನಿಯರ್ ಗಾಂಧಿ, ರೆಡ್ಡಿಯ ಗೆಲುವಿಗೆ ಮಾಡಬೇಕಾದುದೆಲ್ಲವನ್ನೂ ಮಾಡಿದ್ದರಿಂದ ಪ್ರತಿಪಕ್ಷದವರು ಹೆಚ್ಚೇನು ಮಾತಾಡುವುದು ಬೇಡ ಎಂದು ಮೌನವಹಿಸಿದರು. ಪ್ರಾಸದ ಮೂಲಕವೇ ಹೆಡ್ ಲೈನ್ ಬರೆಯುವ ಪತ್ರಿಕೆಯೊಂದು ಮಾರನೆ ದಿನ “ಮತ್ತೊಂದು ಗಾಂಧಿ ಹತ್ಯೆ” ಎಂಬ ತಲೆಬರಹದಲ್ಲಿ ಗಾಂಧಿಯ ಮೊದಲು ‘ಜೂನಿಯರ್’ ಪದವನ್ನು ಚಿಕ್ಕದಾಗಿ ಪ್ರಕಟಿಸಿತ್ತು.