ಬಯಲು ಸೀಮೆಯಿಂದ (ಕೊಪ್ಪಳದಿಂದ ) ಜಾಣರ ಜಿಲ್ಲೆ (ಉಡುಪಿ)ಗೆ ವರ್ಗವಾಗಿ ಬಂದ ‘ಪ್ರಜಾವಾಣಿ’ ವರದಿಗಾರ ಮಂಜುನಾಥ ಭಟ್ ಏನು ಮಾಡಬಹುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ . ‘ಪ್ರಜಾವಾಣಿ’ ಪತ್ರಿಕೆಯ ‘ಕರಾವಳಿ’ ಪುಟದಲ್ಲಿ ಎಂಥ ಮಾರಾಯ್ರೆ ….? ಅಂಕಣದ ಮೂಲಕ ಗಮನ ಸೆಳದಿದ್ದಾರೆ.
ಸುಮಾರು ಎಪ್ಪತ್ತೇಳು ವಾರಗಳವರೆಗೂ ನಿರಂತರವಾಗಿ ಹರಿದುಬರುತ್ತಿದ್ದ ಈ ಅಂಕಣ ಬರಹಗಳ ಭಾಷೆ, ಶೈಲಿ, ವಿಚಾರಗಳಿಂದ ಓದುಗರನ್ನು ಸೆರೆಹಿಡಿಯುವುದರಲ್ಲಿ ಯಶಸ್ಸನ್ನು ಗಳಿಸಿದೆ. ಆಯ್ದ ಬರಹಗಳ ಸುಂದರ ಗುಚ್ಛ ಈ ‘ಎಂಥ ಮಾರಾಯ್ರೆ’ ಇದು ಜಾಣರ ಸಮಾಚಾರ.
ಮಂಜುನಾಥ ಭಟ್ ರು ಉಡುಪಿಯಲ್ಲಿ ನೆಲೆಸಿದ್ದಾಗ ಇಲ್ಲಿಯ ವಿದ್ಯಮಾನಗಳಿಗೆ ಕಣ್ಣು ಕಿವಿಗಳನ್ನು ತೆರೆದಿಟ್ಟು ತನ್ನ ಸಹೃದಯೀ ಪ್ರತಿಕ್ರಿಯೆಗಳನ್ನು ಈ ಅಂಕಣಗಳ ಮೂಲಕ ಹೊರಗೆಡಹಿದ್ದಾರೆ. ಇಲ್ಲಿ ಹಾಸ್ಯವಿದೆ, ವಿಡಂಬನೆ ಇದೆ, ಆದೇಶವಿದೆ, ಸಂದೇಶವಿದೆ, ರೋಚಕತೆ ಇದೆ, ರಸಿಕತೆಯೂ ಇದೆ. ಬರಹಗೆಳಿಗೆ ತಮ್ಮ ರೇಖೆಗಳಿಂದ ಜೀವ ತುಂಬಿದ್ದಾರೆ ವ್ಯಂಗ್ಯ ಚಿತ್ರಕಾರ ಜೀವನ್. ಮುಖಪುಟದಲ್ಲಿ ಜೇಮ್ಸ್ ವಾಜ್ ತನ್ನ ಕೈಚಳಕ ತೋರಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾಡಿನ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆಯ ಮೆಚ್ಚುಗೆಯ ಮುನ್ನುಡಿ ಇದೆ. ಮಂಜುನಾಥ ಭಟ್ ರ ಈ ಚೊಚ್ಚಲ ಸಾಹಸಕ್ಕೆ ಭಲೇ ಎನ್ನಲೇಬೇಕು. ಹೌದು. ನೀವು ಕೊಂಡು ಓದಿ, ಆನಂದಿಸಬಹುದಾದ ಒಳ್ಳೆಯ ಕೃತಿ ಎಂಥ ಮಾರಾಯ್ರೆ.
-ಕು ಗೋ
ಬೆನ್ನುಡಿಯಿಂದ