ಪುಟಗಳು

ಸರ್ವಜ್ಞನ ವಚನಗಳು

೧.
ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ

೨.
ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ

೩.
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
ಮುದವ ಸಾರೆ, ಸರ್ವಜ್ಞನೆಂದೆನಿಸಿ
ನಿಂದವನು ನಾನೆ ಸರ್ವಜ್ಞ

೪.
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ

೫.
ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ

೬.
ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ

೭.
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ

೮.
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ

೯.
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ

೧೦.
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ

೧೧.
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರನು ಓರ್ವನೇ
ನರ ದೈವವೆಂಬೆ ಸರ್ವಜ್ಞ

೧೨.
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರಾ ಗುರುವಿಗಿಂತ
ಬಂಧುಗಳುಂಟೆ ಸರ್ವಜ್ಞ

೧೩.
ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
ಮಾಯನಾಶವನು ಹರಿಸುತ್ತ ಶಿಷ್ಯಂಗೆ
ತಾಯಿಯಂತಾದ ಸರ್ವಜ್ಞ

೧೪.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ. ಗುರುರಾಯ
ಬಂಧನವ ಕಳೆವ ಸರ್ವಜ್ಞ

೧೫.
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ

೧೬.
ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರಮನೆಯಕ್ಕು ಸರ್ವಜ್ಞ

೧೭.
ಒಂದರೊಳಗೆಲ್ಲವು ಸಂದಿಸುವದನು ಗುರು
ಚಂದದಿಂ ತೋರಿಕೊಡದಿರಲು ಶೊಷ್ಯನವ
ಕೊಂದನೆಂದರಿಗು ಸರ್ವಜ್ಞ

೧೮.
ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೆ? ಸರ್ವಜ್ಞ

೧೯.
ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ ದೈವ ಸರ್ವಜ್ಞ

೨೦.
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ
ನಂಬುವನೇ ಹೆಡ್ಡ ಸರ್ವಜ್ಞ

೨೧.
ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
ನಂಜಿನಂತಕ್ಕು ಸರ್ವಜ್ಞ

೨೨.
ಎಂಜಲೂ ಅಶೌಚ
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
ರಂಜನನ ನೆನೆಯೊ ಸರ್ವಜ್ಞ

೨೩.
ಭೂತೇಶಗೆರಗುವನು ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು ಸರ್ವಜ್ಞ

೨೪.
ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ? ಸರ್ವಜ್ಞ

೨೫.
ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
ಜಾತಂಗೆ ಜಾತನೆನಲೇಕೆ? ಅರುವಿಡಿ
ದಾತನೇ ಜಾತ ಸರ್ವಜ್ಞ

೨೬.
ಯಾತರ ಹೂವೇನು ? ನಾತವಿದ್ದರೆ ಸಾಕು
ಜಾತಿಯಲಿ ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ

೨೭.
ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ
ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ
ರಕ್ಕರವೇ ಸಾಕು ಸರ್ವಜ್ಞ

೨೮.
ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು
ಇಲ್ಲೆನ್ನಲರಿಯನು ಸರ್ವಜ್ಞ

೨೯.
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚಂದ್ರಶೇಖರನು ಮುದಿ ಎತ್ತನೇರಿ ಬೇ
ಕೆಂದುದನು ಕೊಡುವ ಸರ್ವಜ್ಞ

೩೦.
ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
ಮಾರಸಂಹರನ ನೆನೆದರೆ ಮೃತ್ಯುವು
ದೂರಕ್ಕೆ ದೂರ ಸರ್ವಜ್ಞ

೩೧.
ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
ಭವ ಪುಶ್ಪದಿಂ ಶಿವಪೂಜೆ ಮಾಡುವರ
ದೇವರೆಂದೆಂಬೆ ಸರ್ವಜ್ಞ

೩೨.
ಓದು ವಾದಗಳೇಕೆ, ಗಾದಿಯ ಮಾತೇಕೆ
ವೇದ ಪುರಾಣ ನಿನಗೇಕೆ? ಲಿಂಗದಾ
ಹಾದಿಯರಿದವಗೆ ಸರ್ವಜ್ಞ

೩೩.
ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
ಅರ್ಪಿತನ ಗೊಡವೆ ತನಗೇಕೆ? ಲಿಂಗದ
ನೆಪ್ಪನರಿದವಗೆ ಸರ್ವಜ್ಞ

೩೪.
ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ
ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ
ಲಿಂಗದರುವಿಲ್ಲ ಸರ್ವಜ್ಞ

೩೫.
ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
ಭ್ರಷ್ಟನ ಕಂಡ್ಯಾ ? ಸರ್ವಜ್ಞ

೩೬.
ಗುರುವಿಂದ ಬಂಧುಗಳು, ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ
ಗುರುವಿಂದ ಮುಕ್ತಿ ಸರ್ವಜ್ಞ

೩೭.
ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ
ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ
ವವಗೆ ಕಾಣಯ್ಯ ಸರ್ವಜ್ಞ

೩೮.
ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ
ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ
ಬಿಟ್ಟು ಬಯಲಪ್ಪ ಸರ್ವಜ್ಞ

೩೯.
ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು
ಇಟ್ಟಾವಿಭೂತಿಯರಿಯದಿರೆ ಸೀಳಿದಾ
ಬಟ್ಟೆಯಂತಕ್ಕು ಸರ್ವಜ್ಞ

೪೦.
ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ
ಲಿಂಗದಲಿ ನೋಟ, ನುಡಿಕೂಟವಾದವನು
ಲಿಂಗವೇ ಅಕ್ಕು ಸರ್ವಜ್ಞ

೪೧.
ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ
ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ
ಕಾಣಯ್ಯ ಸರ್ವಜ್ಞ

೪೨.
ವಂಶವನು ಪುಗನೆಂದಿ, ಗಾಶಿಸನು ಪರಧನವ
ಸಂಶಯವನಳಿದ ನಿಜಸುಖಿ ಮಹಾತ್ಮನು
ಹಿಂಸೆಗೊಡಬಡನು ಸರ್ವಜ್ಞ

೪೩.
ಅರ್ಪಿತದ ಭೇದವನು
ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ
ಳೊಪ್ಪುತ್ತಲಿಹನು ಸರ್ವಜ್ಞ

೪೪.
ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
ರಾಗದಿಂ ಸತ್ಯವೆರಸಿಹ ಪ್ರಸಾದಿಯ
ಶ್ರಿ ಗುರುವು ಎಂಬೆ ಸರ್ವಜ್ಞ

೪೫.
ಲಿಂಗವಿರಹಿತನಾಗಿ ನುಂಗದಿರು ಏನುವನು
ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
ನುಂಗಿದೆಂತಕ್ಕು ಸರ್ವಜ್ಞ

೪೬.
ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು
ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು
ನಂಜಿನಂತಕ್ಕು ಸರ್ವಜ್ಞ

೪೭.
ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
ಶರಣುವೆ ಲೇಸು ಸರ್ವಜ್ಞ

೪೮.
ಸೋಕಿಡಾ ಸುಖಂಗಳ
ನೇಕವನು ಶಿವಗಿತ್ತು
ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ

೪೯.
ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು ಆದ ಶರಣರಾಹೃದಯದಲಿ
ನೆಲಸಿಹನು ಶಿವನು ಸರ್ವಜ್ಞ

೫೦.
ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು
ಅಚ್ಚಳಿದು ನಿಜದಿ ನಿಂದಂತೆ, ಭೇದವನು
ಮುಚ್ಚುವನೆ ಶರಣ ಸರ್ವಜ್ಞ