ತಮ್ಮ ಬದುಕಿನುದ್ದಕ್ಕೂ ಒಂದು ಶೋಷಣಾತ್ಮಕ ಯಥಾಸ್ಥಿತಿಗೆ ಸವಾಲೆಸೆದು, ಭಾರತದಲ್ಲಿ ಒಂದು ಮಹಿಳಾ ವಿಮೋಚನೆಯ ಆಂದೋಲನವನ್ನು ಕಟ್ಟಲು ಶ್ರಮಿಸಿದ ಹನ್ನೆರಡು ಮಹಿಳೆಯರನ್ನು ಕುರಿತ ಪುಸ್ತಕವಿದು. ಇವು ಅಸಾಮಾನ್ಯ ಬದುಕುಗಳ ಅಸಾಮಾನ್ಯ ಕಥೆಗಳು
- ಪುಸ್ತಕದ ಬೆನ್ನುಡಿಯಿಂದ
ಇದು, ಬೃಂದಾ ಕಾರಟ್ ಅವರು ಮುನ್ನುಡಿಯಲ್ಲಿ ಹೇಳಿರುವಂತೆ, ಹನ್ನೆರಡು ಅಸಾಮಾನ್ಯ ಮಹಿಳೆಯರ ಅಸಾಮಾನ್ಯ ಕಥೆಗಳ ಒಂದು ಸಂಗ್ರಹ. ಇವರೆಲ್ಲಾ ಭಾರತದ ವಿಭಿನ್ನ ಪ್ರದೇಶಗಳಿಂದ, ವಿಭಿನ್ನ ಹಿನ್ನೆಲೆಗಳಿಂದ ಬಂದವರು. ಆದರೆ ಅವರೆಲ್ಲರಲ್ಲಿದ್ದ ಒಂದು ಸಮಾನ ಸಂಗತಿಯೆಂದರೆ ಭಾರತ ಇನ್ನೂ ಬ್ರಿಟಿಷರ ದಾಸ್ಯದಲ್ಲಿದ್ದಾಗ ಅದರ ವಿರುದ್ಧ ಹೋರಾಟಗಳಲ್ಲಿ ರಾಜಕೀಯ ಪ್ರವೇಶಿಸಿದವರು. ಕಟ್ಟುಪಾಡುಗಳನ್ನು ಮುರಿದು, ಕೆಲವೊಮ್ಮೆ ತಮ್ಮ ಕುಟುಂಬಗಳ ವಿರೋಧವನ್ನೂ ಎದುರಿಸಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದವರು. ಕಾರ್ಮಿಕ ಆಂದೋಲನದ ಮುಖಂಡರಾಗಿ, ರೈತ ಆಂದೋಲನದ ಮುಖಂಡರಾಗಿ ಹೆಚ್ಚೆಚ್ಚು ಮಹಿಳೆಯರನ್ನು ಕಾರ್ಯಾಚರಣೆಗೆ ಇಳಿಸಲು ಶ್ರಮಿಸಿದವರು. ಮುಂದೆ ಸ್ವತಂತ್ರ ಭಾರತದಲ್ಲೂ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿ ಮಹಿಳಾ ಆಂದೋಲನವನ್ನು ಕಟ್ಟಿ ಬೆಳೆಸುವುದರೊಂದಿಗೆ ಮಹಿಳೆಯರ ಪ್ರಶ್ನೆಗಳನ್ನು, ಲಿಂಗ ಅಸಮಾನತೆಯ ಪ್ರಶ್ನೆಯನ್ನು ಒಟ್ಟು ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಯೊಂದಿಗೆ ಬೆಸೆಯಲು ಪರಿಣಾಮಕಾರಿ ಪಾತ್ರ ವಹಿಸಿದವರು.
ಮೂಲತಃ ಇಂಗ್ಲೀಷ್ ಭಾಷೆಯಲ್ಲಿ ಪಾರ್ವತಿ ಮೆನನ್ ಅವರು ರಚಿಸಿದ ಈ ಕೃತಿಯನ್ನು ನವದೆಹಲಿಯ `ಲೆಫ್ಟ್ ವರ್ಡ್’ ಪ್ರಕಟಿಸಿದೆ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೆಳ್ಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ಕನ್ನಡದಲ್ಲಿ ಇದನ್ನು ‘ಅಧ್ಯಯನ ಪ್ರಕಾಶನ’ ಪ್ರಕಟಿಸಿತ್ತು. ಈಗ ಅಂತರ್ರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವದ ಸಂದರ್ಭದಲ್ಲಿ ಎರಡನೇ ಮುದ್ರಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದಕ್ಕೆ ಅನುಮತಿ ನೀಡಿದ ‘ಅಧ್ಯಯನ ಪ್ರಕಾಶನ’ಕ್ಕೆ, ಮೂಲ ಲೇಖಕರಾದ ಪಾರ್ವತಿ ಮೆನನ್ ಹಾಗೂ ‘ಲೆಫ್ಟ್ ವರ್ಡ್’ ಪ್ರಕಾಶನಕ್ಕೆ ಮತ್ತು ಅನುವಾದಿಸಿ ಕೊಟ್ಟ ಡಾ.ಎನ್. ಗಾಯತ್ರಿ ಯವರಿಗೆ ನಾವು ಕೃತಜ್ಞರು.
-ಪ್ರಕಾಶಕರ ಮಾತು