ಪುಟಗಳು

ಉತ್ತರ ಭಾರತ ಗಡಗಡ: ಎಚ್ಚರಿಕೆಯ ಗಂಟೆ?

ಶ್ರೀನಗರ, ಮಾ. 21: ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ಸೋಮವಾರ ಮಧ್ಯಾಹ್ನ ಭೂಮಿ ಕಂಪಿಸಿದೆ. ಅಫಘಾನಿಸ್ತಾನದ ಹಿಂದೂಕುಶ್ ಭಾಗದಲ್ಲಿ ಕೇಂದ್ರೀಕೃತವಾಗಿದ್ದ ಭೂಕಂಪ ಸಾಧಾರಣ ಪ್ರಮಾಣದಲ್ಲಿತ್ತು. ತಕ್ಷಣಕ್ಕೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಆದರೆ ಜಪಾನ್ ಸುನಾಮಿ ಹಿನ್ನೆಲೆಯಲ್ಲಿ ಏಷ್ಯಾ ಉಪಖಂಡಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿರಬಹುದೇ ಎಂದು ವಿಶ್ಲೇಷಿಸಲಾಗುತ್ತಿದೆ.


ಮೊದಲಿಗೆ ಜಮ್ಮು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಶ್ರೀನಗರ ಸಣ್ಣಗೆ ನಡುಗಿದೆ. ಕಣಿವೆಯ ಇತರೆ ಭಾಗಗಳಲ್ಲೂ ಭೂಮಿ ಕಂಪಿಸಿದೆ. 3.19ರಲ್ಲಿ ಸಂಭವಿಸಿರುವ ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 5.4 ರಷ್ಟಿತ್ತು ಎಂದು ಸ್ಥಳೀಯ ಹವಾಮಾನ ಇಲಾಖೆಯ ನಿರ್ದೇಶಕ ಸೋನಮ್ ಲೋಟಸ್ ತಿಳಿಸಿದ್ದಾರೆ.

ಇದೇ ವೇಳೆ ರಾಜಸ್ಥಾನ, ದೆಹಲಿ, ನೋಯ್ಡಾ, ಹಿಮಾಚಲ ಪ್ರದೇಶಗಳಲ್ಲೂ ಭೂಮಿ ಗಡ ಗಡ ನಡುಗಿದೆ. ಉತ್ತರ ಪಾಕಿಸ್ತಾನದಲ್ಲಿ 6.1ರಷ್ಟು, ದೆಹಲಿಯಲ್ಲಿ 3.2ರಷ್ಟು ಭೂಕಂಪನ ದಾಖಲಾಗಿದೆ. ಸೋಮವಾರ ಭೂಕಂಪ ಸಂಭವಿಸಿರುವ ಬಹುತೇಕ ಕಡೆ ಹಲವು ಕಟ್ಟಡಗಳು ಬಿರುಕು ಬಿಟ್ಟಿವೆ. ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಸ್ಥಳೀಯರು ಭೀತಿಯಿಂದ ಮನೆ ಬಿಟ್ಟು ಹೊರಬಂದ ಘಟನೆಗಳು ನಡೆದಿವೆ