ಪುಟಗಳು

ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟ

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅದರ ಭಾಗವಾದ ಅಸ್ಪೃಶ್ಯತೆಯ ಪ್ರಶ್ನೆ ಮತ್ತೆ- ಮತ್ತೆ ಏಳುತ್ತಾ ಬಂದಿದೆ. ಇದರಲ್ಲಿ ಅಡಕವಾಗಿರುವ ಅಸಮಾನತೆ ಮತ್ತು ಶೋಷಣೆಯ ಅಂಶಗಳ ಮೇಲೆ ಚರ್ಚೆಗಳು, ಆಂದೋಲನಗಳು ನಡೆಯುತ್ತ ಬಂದಿವೆ. ಆಧುನಿಕ ಭಾರತದಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದ ಹೋರಾಟ ಇಂತವುಗಳಲ್ಲಿ ಪ್ರಮುಖವಾದದ್ದು. ಈ ಅವಿರತ ಹೋರಾಟಗಾರ ದಲಿತ ವಿಭಾಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದರು, ಮೇಲ್ಜಾತಿ ಆಪಾಢಭೂತಿತನಗಳನ್ನು ಬಯಲಿಗೆಳೆದರು, ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ, ನಂತರವೂ ಕಾಂಗ್ರೆಸ್ ಮತ್ತು ಅದರ ನೀತಿಗಳನ್ನು ಬಯಲಿಗೆಳೆದರು. ಆದರೆ ಅಂತಿಮವಾಗಿ ಹಿಂದೂ ಸಮಾಜದ ಅನ್ಯಾಯಗಳಿಂದ ತಪ್ಪಿಸಿಕೊಳ್ಳಲು ಬೌದ್ಧ ಧರ್ಮವನ್ನು ಅಂಗೀಕರಿಸಿ ಎಂದು ತಮ್ಮ ಅನುಯಾಯಿಗಳಿಗೆ ಹೇಳಿದರು. ಇದರಿಂದ ದಲಿತರ ಪರಿಸ್ಥಿತಿ ಬದಲಾಗಲಿಲ್ಲ. ಈಗಲೂ ಒಂದೆಡೆ ಅಂಬೇಡ್ಕರ್‌ರವರನ್ನು ಅಧಿಕೃತವಾಗಿ ಹಾಡಿ ಹೊಗಳಲಾಗುತ್ತಿದೆ, ಅವರ ಹೆಸರನ್ನು ಬಳಸಿಕೊಳ್ಳಲು ಆಳುವ ವರ್ಗಗಳ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ; ಇನ್ನೊಂದೆಡೆ ಸಮಾನತೆಯ ಟೊಳ್ಳು ಹೇಳಿಕೆಗಳು, ಮೀಸಲಾತಿ ಇತ್ಯಾದಿಗಳು ಕೇಳಬರುತ್ತಿವೆಯೇ ಹೊರತು ಬಹುಪಾಲು ದಲಿತರ ಬದುಕಿನ ಬವಣೆಗಳು ಕೊನೆಗಾಣುತ್ತಿಲ್ಲ. ಇದು ಸಮಾನತೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತರ ಮುಂದೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಇಂತಹ ಸನ್ನಿವೇಶದಲ್ಲಿ ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟದ ಒಂದು ವಸ್ತುನಿಷ್ಟ ಪರಾಮರ್ಶೆ ಇಂತಹ ಕಾರ್ಯಕರ್ತರಿಗೆ ಮುಂದಿನ ದಾರಿ ತೋರಬಲ್ಲದು. ಅವರ ಕರ್ಮಭೂಮಿಯಾದ ಮಹಾರಾಷ್ಟ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾರ್ಮಿಕ ಮುಂದಾಳು ಪ್ರಭಾಕರ ಸಂಝಗಿರಿಯವರು ಇಂತಹ ಒಂದು ಪರಾಮರ್ಶೆಯನ್ನು ಡಾ.ಅಂಬೇಡ್ಕರ್‌ರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮಾಡಿದ್ದರು. ಮುಂದೆ ಅದು ಪುಸ್ತಕರೂಪದಲ್ಲಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಯಿತು. ಅದರ ಅನುವಾದ ಈ ಪುಸ್ತಕ.
ಶೀರ್ಷಿಕೆ: ಡಾ. ಬಿ.ಆರ‍್.ಅಂಬೇಡ್ಕರ‍್ – ಜೀವನ ಮತ್ತು ಹೋರಾಟ ಲೇಖಕರು: ಪ್ರಭಾಕರ‍್ ಸಂಝಗಿರಿ ಅನುವಾದ:ಸಬಿತಾ ಶರ್ಮ ಪ್ರಕಾಶಕರು: ಕ್ರಿಯಾ ಪ್ರಕಾಶನ ಪುಟ: 48+4 ಬೆಲೆ:ರೂ.15/-