ಪುಟಗಳು

ಗಣಿಯಾಳದಲ್ಲಿ ಸಿಕ್ಕಿಹಾಕಿಕೊಂಡ 33 ಕಾರ್ಮಿಕರನ್ನು ಮೇಲಕ್ಕೆತ್ತಿದ ಅಭೂತಪೂರ್ವ ಘಟನೆಯ ದಾಖಲೆ ಕನ್ನಡದಲ್ಲಿ


























ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲಾ ಕ್ಯಾಮರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು.
ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರೊ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. `ನಾವು 33 ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ `ಲೋಸ್ 33′ (ಈ 33) ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್ ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.
ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫೋನ್ ಉಪಕರಣವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. `ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನಲ್ಲೇ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು ಫೋನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ 680 ಮೀಟರ‍್ ಆಳದಲ್ಲಿದ್ದವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.
ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ.
`ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು.
`ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ.
ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು:
`ಸರ‍್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.
ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಬಂತು -
`ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’
ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು. ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು?
ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು,
`ಓ ಎಲ್ ಸಿಲೋ…. ಓ ಎಲ್ ಸಿಲೊ …. ಕೊಂತ್ರಾಲಾ ಒಪ್ರೆಸೆನ್ ….’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು.
ಪಾತಾಳದಲ್ಲಿದ್ದ ಎಲ್ಲ 33 ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು!
ನೆರೆದಿದ್ದವರ ಕಣ್ಣು ಮಂಜಾಗಿತ್ತು.
….
- ಪುಸ್ತಕದೊಳಗಿನಿಂದ (ಪುಟ : 39-40)
ಏಳುನೂರು ಮೀಟರ‍್ ಆಳದಲ್ಲಿ 33 ಗಣಿಗಾರರು ಸಿಕ್ಕಿಹಾಕಿಕೊಂಡಿದ್ದಾರೆ. ಹದಿನೇಳು ದಿನ ಶ್ರಮಿಸಿ 3 ಅಂಗುಲ ಬೋರ‍್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿರುವುದು ಗೊತ್ತಾಗಿದೆ. ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ನಾಲ್ಕು ತಿಂಗಳೇ ಬೇಕು. ಅದುವರೆಗೆ ಆ ಮುಷ್ಟಿಗಾತ್ರದ ರಂಧ್ರದ ಮೂಲಕ ಅವರಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.,
2010ರ ಅಕ್ಟೋಬರ‍್ ನಲ್ಲಿ ಚಿಲಿ ಎಂಬ ಪುಟ್ಟ ದೇಶ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿದಾಗ ಆ ಮಹಾಸಾಹಸದ ವೀಕ್ಷಣೆಗೆ 3000 ವರದಿಗಾರರು ಸೇರಿದ್ದರು. ನೂರು ಕೋಟಿಗೂ ಹೆಚ್ಚು ಜನರು ನೇರ ಪ್ರಸಾರದಲ್ಲಿ ಅದನ್ನು ಕಣ್ಣಾರೆ ನೋಡಿದರು. ಸಾಮಾನ್ಯ ಪ್ರಜೆಗಳ ಈ ಅಸಾಮಾನ್ಯ ಸಾಧನೆ `ಮನುಕುಲಕ್ಕೇ ಸ್ಫೂರ್ತಿದಾಯಕ ಸಾಧನೆ’ ಎಂಬ ಶ್ಲಾಘನೆಗೆ ಪಾತ್ರವಾಯಿತು.
ಕಲ್ಪನೆಗೂ ಮೀರಿದ ಈ ನೈಜಕತೆಯನ್ನು ಥ್ರಿಲ್ಲರ‍್ ಶೈಲಿಯಲ್ಲಿ ಬರೆದ ಸರೋಜಾ ಪ್ರಕಾಶ್ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದವರು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆಯುವ ಇವರು ಚಿಲಿ ಸಾಹಸದ ಕಥೆಯನ್ನು ಎಲ್ಲರಿಗೂ ಇಷ್ಟವಾಗುವಂತೆ ಬರೆದಿದ್ದಾರೆ. ಈ ಅಪೂರ್ವ ಘಟನೆ ಇಂಗ್ಲೀಷ್ ನಲ್ಲಿ ಕಾದಂಬರಿಯಾಗಿಯೋ, ಸಿನೆಮಾ ಆಗಿಯೋ ಬರುವ ಮೊದಲೇ ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿದೆ. ಅದು ಹೆಮ್ಮೆಯ ದಾಖಲೆ.
- ನಾಗೇಶ ಹೆಗಡೆ
(ಪುಸ್ತಕದ ಬೆನ್ನುಡಿಯಿಂದ )
ಶೀರ್ಷಿಕೆ: ಚಿಲಿಯ ಕಲಿಗಳು – ಗಣಿ ಪಾತಾಳದಲ್ಲಿ 33 ಜನ 69 ದಿನ ಲೇಖಕರು:ಸರೋಜಾ ಪ್ರಕಾಶ ಪ್ರಕಾಶಕರು: ಭೂಮಿ ಬುಕ್ಸ್ ಪುಟಗಳು:156+8 ಬೆಲೆ:ರೂ.110