ಪುಟಗಳು

ಸಾರ್ವಜನಿಕ ಗಣೇಶ ಉತ್ಸವ : ಪೊಲೀಸರ ಕಟ್ಟಪ್ಪಣೆಗಳು


ಬೆಂಗಳೂರು, ಆ. 29 : ಸೆಪ್ಟೆಂಬರ್ 1ರಂದು ಗಣೇಶ ಚತುರ್ಥಿ. ಚತುರ್ಥಿ ಮುಗಿದ ನಂತರವೂ ನಗರದೆಲ್ಲೆಡೆ ತಮಗಿಷ್ಟವಾದ, ಅನುಕೂಲವಾದ ಸಮಯದಲ್ಲಿ ಸಾರ್ವಜನಿಕ ಗಣೇಶನನ್ನು ಗಲ್ಲಿಗಲ್ಲಿಗಳಲ್ಲಿ ಕೂಡಿಸುತ್ತಾರೆ. ಎಷ್ಟೇ ಹಬ್ಬದ ಆಚರಣೆ ಎಂದರೂ ಸಾರ್ವಜನಿಕರಿಗೆ ತೊಂದರೆ ಇದ್ದದ್ದೆ. ನಗರದಲ್ಲಿ ಶಾಂತಿ, ಸಂಯಮ, ಶಿಸ್ತು, ಕಾನೂನು ಪಾಲನೆಯ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಕೆಲ ನಿಮಯಗಳನ್ನು ವಿಧಿಸಿದ್ದಾರೆ. ನಿಯಮ ಪಾಲಿಸದಿದ್ದರೆ ಜೈಲು ಗ್ಯಾರಂಟಿ ಎಂಬ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.

ನಿಯಮಾವಳಿಗಳು ಕೆಳಗಿನಂತಿವೆ

* ಗಣೇಶ ಹಬ್ಬದಂದು ಹಾದಿಬೀದಿಗಳಲ್ಲಿ ವಿಗ್ರಹ ಪ್ರತಿಷ್ಠಾಪಿಸುವಂತಿಲ್ಲ.
* ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವವರು ಸಮೀಪದ ಪೊಲೀಸ್ ಸ್ಟೇಶನ್, ಬಿಬಿಎಂಪಿ, ಬೆಸ್ಕಾಂ ಮತ್ತು ಅಗ್ನಿಶಾಮಕ ದಳದ ಕಚೇರಿಯಿಂದ NOC ಪಡೆಯತಕ್ಕದ್ದು.
* ಬೆಳಗ್ಗೆ ಆರರಿಂದ ರಾತ್ರಿ ಹತ್ತರವರೆಗೆ ಮಾತ್ರ ಧ್ವನಿವರ್ಧಕ (ಮೈಕ್) ಉಪಯೋಗಿಸುವುದು.
* ಕಾರ್ಯಕ್ರಮ, ವಿಸರ್ಜನೆ ಮೆರವಣಿಗೆ ಸಾಗುವ ದಾರಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡತಕ್ಕದ್ದು.
* ಗಣೇಶನ ವಿಸರ್ಜನೆ ರಾತ್ರಿ ಹತ್ತರ ವೇಳೆಗೆ ಮುಗಿಯತಕ್ಕದ್ದು.
* ಅಶ್ಲೀಲ ಹಾಡು ಮತ್ತು ನೃತ್ಯ ನಿಷಿದ್ದ.
* ಕಾರ್ಯಕ್ರಮ ಮತ್ತು ಮೆರವಣಿಗೆ ವೇಳೆ VIPಗಳು ಭಾಗವಹಿಸುತ್ತಿದ್ದರೆ ಮುಂಚಿತವಾಗಿ ಪೊಲೀಸರಿಗೆ ತಿಳಿಸುವುದು.
* ಜನಸಂಚಾರದ ಒತ್ತಡ ಹೆಚ್ಚಿರುವ ಪ್ರದೇಶದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಇಲ್ಲ.
* ಮೆರವಣಿಗೆ ವೇಳೆ ಸ್ಥಳೀಯ ಪೊಲೀಸರು ಕಡ್ಡಾಯವಾಗಿ ಇರತಕ್ಕದ್ದು.
* ಪೊಲೀಸ್ ನೀಡುವ ಸೂಚನೆ ಮೀರಿದರೆ ಬಂಧನ.
* ಸ್ಥಾಪನೆ, ಕಾರ್ಯಕ್ರಮ ಆಯೋಜನೆಗೆ ಚಂದಾ ವಸೂಲಿ ಮಾಡುವಂತಿಲ್ಲ.
* ಸೂಕ್ಷ್ಮ ಪ್ರದೇಶದಲ್ಲಿ ಪಟಾಕಿ ಸಿಡಿಸುವಂತಿಲ್ಲ.
* ವಿದ್ಯಾರ್ಥಿ, ರೋಗಿಗಳು ಮತ್ತು ನಾಗರಿಕರಿಗೆ ತೊಂದರೆ ಆಗದಂತೆ ಧ್ವನಿವರ್ಧಕ ಬಳಸಬೇಕು.
* ಬಿಬಿಎಂಪಿ ಮತ್ತು ಪೊಲೀಸರು ಗುರುತಿಸಿದ ಪ್ರದೇಶದಲ್ಲೇ ವಿಸರ್ಜನೆ ಮಾಡತಕ್ಕದ್ದು.

ಮೇಲೆ ವಿಧಿಸಿದ ಎಲ್ಲಾ ನಿಯಮಗಳನ್ನು ಸಾರ್ವಜನಿಕರು ಮತ್ತು ಪ್ರಾಯೋಜಕರು ಅನುಸರಿಸಿ ಪೊಲೀಸ್ ಇಲಾಖೆಗೆ ಮತ್ತು ಬಿಬಿಎಂಪಿಗೆ ಸಹಕರಿಸಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ನಿವೇದನೆ ಮಾಡಿಕೊಂಡಿದ್ದಾರೆ.