ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ.
ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ವರಮಹಾಲಕ್ಷ್ಮಿ ಪೂಜೆಯ ಚಿತ್ರ ಕೆಳಗಿದೆ.
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ.ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡಬೇಕು.
ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ, ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡಿಗೆಯಲ್ಲಿ ಉಪಯೋಗಿಸಿ, ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಿ. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ, ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು.
ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ :)
ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ, ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡಿಗೆಯಲ್ಲಿ ಉಪಯೋಗಿಸಿ, ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಿ. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ, ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು.
ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ :)