ಪುಟಗಳು

ಹುಷಾರು! ನಾಸಾ ಉಪಗ್ರಹ ಅವಶೇಷ ತಲೆ ಮೇಲೆ ಬೀಳಬಹುದು

ಹೈದರಾಬಾದ್, ಸೆ.21: ಮೇಲ್ಮೈ ವಾತಾವರಣ ಸಂಶೋಧನಾ ಉಪಗ್ರಹದ (ಯುಎಆರ್ಎಸ್‌) ಭಗ್ನಾವಶೇಷಗಳು ಮುಂದಿನ ಕೆಲವು ದಿನಗಳಲ್ಲಿ (ಸೆ.23) ಭೂಮಿಗೆ ಬಡಿಯುವ ನಿರೀಕ್ಷೆಯಿದೆ ಎಂದು ನಗರದ ಬಿಎಂ ಬಿರ್ಲಾ ವಿಜ್ಞಾನ ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದ ನಾಸಾ ವಿಜ್ಞಾನಿಗಳ ಪ್ರಕಾರ ಅದು ಯಾವುದಾದರೂ ಸಾಗರ, ಸಮುದ್ರದಲ್ಲಿ ಬೀಳುವ ಸಾಧ್ಯತೆಗಳು ದಟ್ಟವಾಗಿವೆ.

ಬಸ್ಸಿನ ಗಾತ್ರದ ಈ ಉಪಗ್ರಹವನ್ನು 1991ರಲ್ಲಿ ಅಮೆರಿಕದ ನಾಸಾ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಅದು 2005ರ ತನಕ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಅದು ನಿಧಾನವಾಗಿ ಭೂಮಿಯ ವಾತಾವರಣಕ್ಕೆ ಜಾರಲಾರಂಭಿಸಿತು. ಈ ಪ್ರಕ್ರಿಯೆಯಲ್ಲಿ ಅದು ಛಿದ್ರಗೊಂಡಿದೆ ಎಂದು ಸಂಸ್ಥೆಯ ಮಹಾನಿರ್ದೇಶಕ ಬಿಜಿ ಸಿದ್ದಾರ್ಥ ಅವರು ಹೇಳಿದ್ದಾರೆ.

'5.6 ಟನ್ ತೂಕದ ಈ ಉಪಗ್ರಹದ ಅವಶೇಷಗಳ ಸಣ್ಣ ತುಣುಕುಗಳು ಭೂಮಿಯನ್ನು ತಲಪುವ ಮೊದಲೇ ಉರಿದುಹೋಗಬಹುದು. ಆದರೆ ದೊಡ್ಡ ತುಣುಕುಗಳು ಭೂಮಿಯನ್ನು ತಲಪಬಹುದು. ಯಾವುದೇ ಸ್ಥಳ ಅಥವಾ ವ್ಯಕ್ತಿ ಮೇಲೆ ಇಂಥ ತುಣುಕು ಬೀಳುವ ಸಾಧ್ಯತೆ ಸಾವಿರ ಶತಕೋಟಿಯಲ್ಲಿ ಒಂದಕ್ಕಿಂತಲೂ ಕಡಿಮೆಯಿದೆ. ಆದರೆ ಅವಶೇಷಗಳು ಭೂಮಿಯ ಯಾವುದೋ ಒಂದು ಸ್ಥಳದಲ್ಲಿ ಬೀಳುವ ಸಾಧ್ಯತೆ ಅಧಿಕವಾಗಿದೆ' ಎಂದು ಅವರು ಎಚ್ಚರಿಸಿದ್ದಾರೆ.

ಬಾಹ್ಯಾಕಾಶದಿಂದ ಅವಶೇಷಗಳು ಭೂಮಿಗೆ ಬಡಿಯುವ ಇಂಥ ಘಟನೆ ಈ ಹಿಂದೆಯೂ ಸಂಭವಿಸಿತ್ತು. 1970ರಲ್ಲಿ ಸ್ಕೈಲ್ಯಾಬ್‌ ವ್ಯೋಮನೌಕೆ ಭೂಮಿಗೆ ಬಿದ್ದಿತ್ತಾದರೂ ಯಾವುದೇ ಜೀವಹಾನಿ ಅಥವಾ ಸೊತ್ತು ಹಾನಿ ಸಂಭವಿಸಿರಲಿಲ್ಲ.

ತೀರಾ ಈಚೆಗೆ ವ್ಯೋಮಯಾತ್ರಿ ಕಲ್ಪನಾ ಚಾವ್ಲಾ ಮತ್ತು ಇತರ ಸಿಬ್ಬಂದಿಯನ್ನು ಹೊತ್ತಿದ್ದ ವ್ಯೋಮನೌಕೆ 'ಕೊಲಂಬಿಯಾ' ವಾಯುಮಂಡಲವನ್ನು ಪ್ರವೇಶಿಸುವ ವೇಳೆ ಸ್ಫೋಟಗೊಂಡು ಅದರ ಅವಶೇಷಗಳು ಭೂಮಿಯ ಕೆಲವೆಡೆ ಬಿದ್ದಿತ್ತು. ಆಗ ಕೂಡ ಭೂಮಿಯಲ್ಲಿ ಯಾವುದೇ ಹಾನಿ ಸಂಭವಿಸಿರಲಿಲ್ಲ. ಈ ಬಾರಿಯೂ ಇದು ನಿಜವಾಗಲಿದೆ ಎಂದೂ ಅವರು ವಿಶ್ವಾಸ ಹೊಂದಿದ್ದಾರೆ.