ಪುಟಗಳು

ಏ.27ರಂದು ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಇಲ್ಲ

 
KSRTC, BMTC bus employees strike

ಬೆಂಗಳೂರು, ಏ.22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳು ಶುಕ್ರವಾರ, ಏ.27ರಂದು ರಸ್ತೆಗಿಳಿಯುವುದು ಅನುಮಾನ. ಈ ಎಲ್ಲಾ ಸಂಸ್ಥೆಯ ಲಕ್ಷಾಂತರ ನೌಕರರು ಅನಿರ್ಧಿಷ್ಟ ಕಾಲ ಮುಷ್ಕರ ಹೂಡುತ್ತಿದ್ದಾರೆ.

ಏ.27ರ ಮುಂಜಾನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವಂತೆ, ಸಂಸ್ಥೆಯ ಆರು ಕಾರ್ಮಿಕ ಸಂಘಗಳ ಜಂಟಿ ಕಾರ್ಯಕಾರಿ ಸಮಿತಿ ಭಾನುವಾರ(ಏ.22) ಕರೆ ನೀಡಿದೆ.

ಮುಷ್ಕರಕ್ಕೆ ಕಾರಣಗಳೇನು?: ಸಾರ್ವಜನಿಕ ಕ್ಷೇತ್ರದಲ್ಲಿ ಸಾರಿಗೆ ಸಂಸ್ಥೆಗಳನ್ನು ಸ್ಥಾಪಿಸಿದ ಮೂಲ ಉದ್ದೇಶವನ್ನು ಮರೆತು ಲಾಭ ಗಳಿಸುವುದೇ ಏಕೈಕ ಗುರಿ ಎಂಬಂತೆ ಪ್ರಯಾಣಿಕರನ್ನು ಸುಲಿಗೆ ಮಾಡಲಾಗುತ್ತಿದೆ.

* ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ವಿಧಿಸಿರುವ ದರ ಕ್ಕಿಂತ ಶೇ 20 ರಿಂದ 35ರಷ್ಟು ಪ್ರಯಾಣದರ ಹಾಗೂ ಲಗೇಜ್ ದರವನ್ನು ಹೆಚ್ಚಿಸಲಾಗಿದೆ.

* ಸಂಸ್ಥೆಯ ನೀತಿಯ ಕಾರಣ, ಪ್ರಯಾಣಿಕರು ಖಾಸಗಿ ವಾಹನ, ಸ್ವಂತ ವಾಹನ ಬಳಸುತ್ತಿದ್ದಾರೆ. ಸಾರ್ವಜನಿಕ ವಾಹನಕ್ಕೆ ಬೆಲೆ ಇಲ್ಲದ್ದಂತಾಗಿದೆ.

* ಸಂಸ್ಥೆ ನೌಕರರನ್ನು ಆಡಳಿತಾತ್ಮಕ ಕಾರಣ ನೀಡಿ ಎಲ್ಲೆಂದರಲ್ಲಿ ವರ್ಗಾವಣೆ ಮಾಡಿ ಶೋಷಣೆ ನೀಡಲಾಗುತ್ತಿದೆ.

ಸರ್ಕಾರದ ಪ್ರತಿನಿಧಿಗಳು, ಸಂಸ್ಥೆ ಪ್ರತಿನಿಧಿಗಳು ಮತ್ತು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಪ್ರತಿನಿಧಿಗಳ ತ್ರಿಪಕ್ಷೀಯ ಒಪ್ಪಂದ ವಾಗಬೇಕು. ಇಲ್ಲವೇ ಸಾರ್ವಜನಿಕರನ್ನೂ ಸೇರಿಸಿಕೊಂಡು ಚತುಷ್ಪಕ್ಷೀಯ ಒಪ್ಪಂದ ಆಗುವ ತನಕ ಮುಷ್ಕರ ಮುಂದುವರೆಯಲಿದೆ ಎಂದು ಜಂಟಿ ಸಮಿತಿ ಪರವಾಗಿ ವಿನಯ್ ಕುಮಾರ್ ಹೇಳಿದ್ದಾರೆ.

ಈ ಮುಷ್ಕರಕ್ಕೆ AITUC, CITU, Indian National Trade union congress (INTUC), ಎಸ್ ಸಿ/ಎಸ್ ಟಿ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.

ಯಾರಿಗೆ ಸಾಲುತ್ತೆ ಸಂಬಳ: 30 ವರ್ಷ ಅನುಭವ ಇದ್ದರೂ 30 ಸಾವಿರ ರು ಸಂಬಳ ಕೈಗೆ ಸಿಗುತ್ತಿಲ್ಲ. ಡ್ರೈವರ್, ಕಂಡೆಕ್ಟರ್ ಸಂಬಳ 5-6 ಸಾವಿರ ರು ಇರುತ್ತೆ. ಟಿಸಿಗಳು 4,500 ರು ಸಂಬಳ ಹೆಚ್ಚಿಗೆ ಬೇಕು ಎನ್ನುತ್ತಿದ್ದಾರೆ.

ಸಾರಿಗೆ ಸಂಸ್ಥೆ ತಲೆ ಕೆಡಿಸಿಕೊಂಡಿಲ್ಲ: 1,10,000 ಚಾಲಕರು ಮುಷ್ಕರ ಹೂಡಿದರೆ ಅದು ದೊಡ್ಡ ದಾಖಲೆ ಎನ್ನಬಹುದು. ನೋಡ್ತಾ ಇರಿ 400 ಜನ ಬರೋಲ್ಲ ಸ್ಟ್ರೈಕ್ ಗೆ. ಪ್ರತಿ ದಿನ 4-5000 ಜನ ರಜೆಯಲ್ಲಿರುತ್ತಾರೆ. ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ. ಏನಾಗುತ್ತೋ ಕಾದು ನೋಡಬೇಕಿದೆ.