ಪುಟಗಳು

ಸ್ತ್ರೀಮತವನುತ್ತರಿಸಲಾಗದೆ?


ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ,
ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ.
ಎಲ್ಲಾ ಕೃತಿಗಳಲ್ಲೂ ಇರುವ ವಾಚ್ಯಾರ್ಥಗಳು ನಿವೃತ್ತವಾಗಿ ನಮಗವು ಧ್ವನಿಸುತ್ತವೆ ಎಂದು ಸುಲಭವಾಗಿ ನಾವು ತಿಳಿದಿರುತ್ತೇವೆ. ಆಶಾದೇವಿಯವರು ಕೃತಿಯ ಈ ವಾಚ್ಯದ ಮುಖವನ್ನು ನೋಡುತ್ತಾರೆ; ಆದರೆ ಈ ವಾಚ್ಯ ಮಾತ್ರ ಮುಖ್ಯವೆನ್ನುವಂತೆ ನೋಡುವುದಿಲ್ಲ. ಕೃತಿಯಿಂದ ಹುಟ್ಟಿದ ರಸಾನುಭವವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತ – ಸಂಭ್ರಮಿಸದಂತೆ ಅನುಮಾನಿಸುತ್ತ ಪ್ರಶ್ನಿಸುತ್ತ – ನೋಡುತ್ತಾರೆ. ಇದು ಕಷ್ಟದ ಸಾಹಸದ ಓದು; ಕೃತಿ ಪೂರ್ಣವಾಗಿ ನಮಗೆ ಒದಗುವಂತೆ ಮಾಡುವ ಓದು ಇದು. ಪ್ರಾಮಾಣಿಕತೆ, ಧೀಮಂತಿಕೆಗಳ ಜೊತೆ ಕೃತಿಗೆ ಎದುರಾಗುವ ಧೈರ್ಯವೂ ಈ ಬಗೆಯ ವಿಮರ್ಶೆಗೆ ಅಗತ್ಯ.
ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಜೀವಂತವಾಗಿದೆ ಎನ್ನಿಸುವಂತೆ ಮಾಡಿರುವ ಆಶಾದೇವಿಗೆ ನಾವು ಕೃತಜ್ಞರು. ವಿಲಕ್ಷಣ ಪ್ರತಿಭೆಯ ನನ್ನ ಗೆಳೆಯ ಡಿ. ಆರ‍್. ನಾಗರಾಜ್ ರ ಹಾದಿಯಲ್ಲಿ ಕನ್ನಡ ಸಾಹಿತ್ಯದ ಅನುಭವವನ್ನು ಆಶಾದೇವಿ ವಿಸ್ತರಿಸುತ್ತಿದ್ದಾರೆ. ಆ ಕ್ರಮವನ್ನು ನಾವು ನಮ್ಮ ಆತ್ಮೀಯ ಓದಿನಲ್ಲಿ ಎದುರಾಗುವಂತೆ ಮಾಡುವ ಬರವಣಿಗೆ ಇಲ್ಲಿದೆ.
- ಯು. ಆರ‍್. ಅನಂತಮೂರ್ತಿ
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಸ್ತ್ರೀಮತವನುತ್ತರಿಸಲಾಗದೆ? ಲೇಖಕರು: ಎಂ.ಎಸ್. ಆಶಾದೇವಿ ಪ್ರಕಾಶಕರು: ಅಕ್ಷರ ಪ್ರಕಾಶನ ಪುಟ:144 ಬೆಲೆ: ರೂ.90/-