ಪುಟಗಳು

ಸೃಷ್ಟಿಯೋ ವಿಕಾಸವೋ


1859ರ ನವಂಬರ‍್ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ `ಜೀವ ಸಂಕುಲಗಳ ಉಗಮ’ ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ 1250 ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ ಎಂದೆನಿಸಿಕೊಂಡ ಈ ಗ್ರಂಥ ಅಂದು ಇಡೀ ಯುರೋಪ್ ದೇಶವನ್ನು ತಲ್ಲಣಗೊಳಿಸಿತು. ಈ ಜಗತ್ತು ಒಂದು ಪರಮ ಶಕ್ತಿಯ ಸೃಷ್ಟಿ ಎಂಬ ಸೃಷ್ಟಿವಾದದ ಪರವಾಗಿ ಮತ್ತು ವಿರುದ್ಧವಾಗಿ ನಡೆದುಕೊಂಡು ಬಂದಿರುವ ವಾದ-ವಿವಾದಗಳ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಘಟನೆಯಾಗಿತ್ತು.
ಸೃಷ್ಟಿವಾದ ಕೇವಲ ಒಂದು ಬೌದ್ಧಿಕ ಚರ್ಚೆಯ ವಿಷಯವಾಗಿರಲಿಲ್ಲ. ಈ ಜಗತ್ತು ಸೃಷ್ಟಿಕರ್ತನ ನಿಯಮದಂತೆ ನಡೆಯುತ್ತಿದೆ. ಎಲ್ಲವೂ ಅವನ ಇಚ್ಛೆ ಮತ್ತು ಅವನ ಲೀಲೆ ಎನ್ನುತ್ತಾರೆ ಸೃಷ್ಟಿವಾದಿಗಳು. ಇದು ನಿಜವೇ? ಇದಕ್ಕೆ ಒಬ್ಬ ಸೃಷ್ಟಿಕರ್ತ ಇದ್ದಾನೆಯೇ? ಈ ಪ್ರಕೃತಿ, ಇದರಲ್ಲಿನ ಸಕಲ ಜೀವರಾಶಿಗಳು ಆ ಸೃಷ್ಟಿಕರ್ತನ ಸೃಷ್ಟಿಯೇ? ಅಸಮಾನತೆ, ಶೋಷಣೆ ಇವೂ ಆ ಸೃಷ್ಟಿಕರ್ತನ ಸೃಷ್ಟಿಯೇ?
ಈ ಕಿರುಹೊತ್ತಿಗೆಯನ್ನು ಬರೆದಿರುವ ಜಿ.ವಿ.ಶ್ರೀರಾಮರೆಡ್ಡಿಯವರು ಹೇಳುವಂತೆ “ಆವತ್ತಿನಿಂದ ಇವತ್ತಿನವರೆಗೂ ತುಳಿತಕ್ಕೆ, ಶೋಷಣೆಗೆ ಒಳಗಾದವರನ್ನು ಕೇಳಿದರೆ, ಇದು ನಮ್ಮ ಕರ್ಮ, ಹಿಂದಿನ ಜನ್ಮದ ಪಾಪದ ಫಲ, ದೇವರು ನಮ್ಮನ್ನು ಹೀಗೇ ಇಟ್ಟಿದ್ದಾನೆ. ನಮ್ಮ ಹಣೆಬರಹ, ದೇವರು ಹೇಗೆ ಇಟ್ಟಿದ್ದಾನೋ ಹಾಗೆ ಇದ್ದೇವೆ ಎಂದೇ ಹೇಳುತ್ತಿದ್ದರು, ಹೇಳುತ್ತಿದ್ದಾರೆ. ಇನ್ನು ಶೋಷಕರು, ಅವರದ್ದೂ ಇದೇ ವಾದ ಮತ್ತು ಅವರು ಅದನ್ನು ಸಮರ್ಥಿಸುತ್ತಾರೆ. ಹಾಗಾದರೆ ಇದು ನಿಜವೆಂದು ನಂಬಬೇಕೇ?” ಇವು ಸಮಾನತೆಯ ಸಮಾಜದ ನಿರ್ಮಾಣದ ಕನಸು ಕಾಣುವ ಎಲ್ಲರನ್ನೂ ಕಾಡುತ್ತಾ ಬಂದಿರುವ ಪ್ರಶ್ನೆಗಳು.
ಶ್ರೀ ರಾಮರೆಡ್ಡಿಯವರು ಈ ಕಿರು ಹೊತ್ತಿಗೆಯಲ್ಲಿ ಈ ಪ್ರಶ್ನೆಗಳಿಗೆ ತಮ್ಮ ಹೋರಾಟಗಳ ಅನುಭವ ಮತ್ತು ಅಧ್ಯಯನದ ಆಧಾರದಲ್ಲಿ ಉತ್ತರಗಳನ್ನು ಕಾಣಲು ಪ್ರಯತ್ನಿಸಿದ್ದಾರೆ.
2009ರಲ್ಲಿ ಚಾರ್ಲ್ಸ್ ಡಾರ್ವಿನ್ನರ ಅಮೂಲ್ಯ ಕೃತಿಯ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಇದು ಅವರ ಜನ್ಮ ದ್ವಿಶತಮಾನೋತ್ಸವದ ವರ್ಷ ಕೂಡಾ. ಕ್ರಿಯಾ ಪ್ರಕಾಶನ ಈ ಪ್ರಕಟಣೆಯ ಮೂಲಕ ಇದರಲ್ಲಿ ಭಾಗಿಯಾಗುತ್ತಿದೆ.
- ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಸೃಷ್ಟಿಯೋ ವಿಕಾಸವೋ ಲೇಖಕರು: ಜಿ.ವಿ.ಶ್ರೀರಾಮರೆಡ್ಡಿ ಪ್ರಕಾಶಕರು: ಕ್ರಿಯಾ ಪ್ರಕಾಶನ ಪುಟ:68 ಬೆಲೆ:ರೂ.30/-