ಪುಟಗಳು

ಬಹುಮುಖಿ


ತಮ್ಮ ಕತೆ ಕಾದಂಬರಿಗಳಿಂದ ಪ್ರಸಿದ್ಧರಾಗಿರುವ ವಿವೇಕ ಶಾನಭಾಗದ ಎರಡನೆಯ ನಾಟಕ `ಬಹುಮುಖಿ‘. ನಗರಾಭಿಮುಖ ಚಲನೆ ತುಂಬ ತೀವ್ರವಾಗಿರುವ ತೀರಾ ಸಮಕಾಲೀನವೆನ್ನಿಸುವ ವಿದ್ಯಮಾನಗಳಿಗೆ ಒಡ್ಡಿದ ರೂಪಕದಂತಿರುವ ಈ ನಾಟಕ ಈ ಹೊತ್ತಿನ ಅನೇಕ ಮುಖ್ಯ ಪ್ರಶ್ನೆಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ. ಹಲವು ಪಾತ್ರ, ಘಟನೆಗಳ ಸುತ್ತ ಹೆಣೆದುಕೊಂಡಿರುವ ಈ ನಾಟಕವು ಸದ್ಯದ ನಗರದ ಜೀವನ ಕ್ರಮದಲ್ಲಿ `ಯಶಸ್ವಿ‘ಯಾಗುವುದು ಹೇಗೆ, `ಸುಖಿ‘ಯಾಗಿರುವುದು ಹೇಗೆ ಎಂಬ ಆತಂಕದಲ್ಲಿರುವ ವ್ಯಕ್ತಿಗಳ ಪಾಡನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಬೆಂಗಳೂರು ಎಂಬುದು ಈ ನಾಟಕದಲ್ಲಿ ಜನಭರಿತವಾದ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ; ಅದು ಇಲ್ಲಿ ಸಮಕಾಲೀನ, `ಆಧುನಿಕ‘ ನಾಗರೀಕತೆಯ ಒಂದು ಕಿರು ರೂಪವೇ ಸರಿ. ಹಾಗಾಗಿ ವಿವೇಕರು ಈ ನಾಟಕದಲ್ಲಿ ಪ್ರತಿಬಿಂಬಿಸುತ್ತಿರುವ ವಿದ್ಯಮಾನಗಳು ಭಾರತೀಯ ಉಪಖಂಡದ ಇವತ್ತಿನ ಯಾವುದೇ ದೊಡ್ಡ ನಗರದ ವಿದ್ಯಮಾನಗಳನ್ನು ಪ್ರತಿಫಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡು ಬಿಡುತ್ತದೆ. ಅನೇಕ ಕುತೂಹಲಕಾರಿ ಸ್ಥಳೀಯ ವಿವರಗಳಿದ್ದೂ ನಾಟಕ ಪಡೆದುಕೊಂಡಿರುವ ಈ ವ್ಯಾಪಕತೆ ವಿವೇಕರ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗಿದೆ.
ಹತ್ತು ದೃಶ್ಯಗಳಿಂದ ಕೂಡಿದ ಈ ನಾಟಕವು ಮೇಲು ನೋಟಕ್ಕೆ ಹಲವು ಬಿಡಿ ದೃಶ್ಯಗಳನ್ನು ಸಡಿಲವಾಗಿ ಜೋಡಿಸಿಟ್ಟಂತಿದೆ. ಹಾಗೆಯೇ, ಬಿರಾಜದಾರ, ಸಂಜಯ, ಶೇಖರ, ಜಕ್ಕೂಜಿ ಮುಂತಾದ ಪಾತ್ರಗಳ ವೈಯಕ್ತಿಕ ಸಮಸ್ಯೆಗಳನ್ನು ಪಕ್ಕ ಪಕ್ಕದಲ್ಲಿ ಇಟ್ಟಂತೆ ಕಾಣುತ್ತದೆ. ಇವೆಲ್ಲವುಗಳನ್ನು ಸಂಯೋಜಿಸಿ ಒಂದು ದರ್ಶನವನ್ನು ಕಟ್ಟಲು ವಿವೇಕರು ವಾಸ್ತವವಾದೀ ನಾಟಕದ ಕಾರ್ಯಕಾರಣ ತರ್ಕವನ್ನು ಅವಲಂಬಿಸುವುದಿಲ್ಲ. ಒಂದು ಕಾಲಕ್ಕೆ ಕನ್ನಡದಲ್ಲಿ ಜನಪ್ರಿಯವಾಗಿದ್ದ ಎಪಿಕ್ ರಂಗಭೂಮಿಯ ತಂತ್ರಗಳನ್ನೂ ವಿವೇಕರು ಬಳಸುವುದಿಲ್ಲ. ನಾಟಕದ ವಸ್ತುವು ನಮ್ಮ ಸುತ್ತಲ ಹಲವು ವ್ಯಕ್ತಿ-ಸನ್ನಿವೇಶಗಳನ್ನು ಹೊಳೆಯಿಸುವಂತಿದ್ದು ಅದನ್ನೊಂದು ಅಸಂಗತ ಪುರಾಣವನ್ನಾಗಿ ಕಟ್ಟುವ ಇರಾದೆ ಸೂಚ್ಯವಾಗಿ ಗೋಚರಿಸಿದರೂ `ಬಹುಮುಖಿ‘ ಒಂದು ಅಸಂಗತ ನಾಟಕವಲ್ಲ. ವಾಸ್ತವವಾದಿ ಮತ್ತು ಅಸಂಗತ ನಾಟಕಗಳ ಪರಿಚಿತ ಮಾದರಿಗಳ ನಡುವಣ ಪ್ರಕಾರವೊಂದನ್ನು ವಿವೇಕರು ಶೋಧಿಸುತ್ತಿದ್ದಾರೆ ಎನಿಸುತ್ತದೆ. ಇವತ್ತಿನ ಕನ್ನಡ ನಾಟಕ ಮತ್ತು ರಂಗಭೂಮಿಗಳ ಸಂದರ್ಭದಲ್ಲಿ ವಿವೇಕರ ಈ ಸೃಜನಶೀಲ ಪ್ರಯತ್ನ ಗಮನ ಸೆಳೆಯುವಂತಿದೆ.
ಈ ನಾಟಕದ ಪ್ರಧಾನ ಪಾತ್ರಗಳ ಅವಸ್ಥೆಯಲ್ಲಿ ಒಂದು ಸಾದೃಶ್ಯ ಗೋಚರಿಸುತ್ತದೆ. ಇವರು ಸಣ್ಣ ಸಣ್ಣ ಊರುಗಳಿಂದ ಬೆಂಗಳೂರೆಂಬ ಮಹಾನಗರಿಗೆ ಬೇರೆ ಬೇರೆ ಕಾರಣಗಳಿಗಾಗಿ ಬಂದವರು. ಈ ನಾಟಕದ ಮುಖ್ಯ ಪಾತ್ರವಾದ ಪತ್ರಕರ್ತ ಸಂಜಯ ಒಂದು ಸಂದರ್ಭದಲ್ಲಿ ಹೇಳುತ್ತಾನೆ : ಸಣ್ಣ ಊರಿನಿಂದ ಬಂದು ಈ ಸಿಟಿಯಲ್ಲಿ ಊರಿಕೊಳ್ಳೋದು ಅಂದರೆ ಏನೂಂತ ನಿನಗೆ ಗೊತ್ತಿಲ್ಲ. ಯಾವುದನ್ನು ನಮ್ಮ ಶಕ್ತಿ ಅಂತ ತಿಳಕೊಂಡು ಬೆಳೆದಿರತೀವೋ ಅದೆಲ್ಲ ಇಲ್ಲಿ ದೌರ್ಬಲ್ಯ ಆಗಿ ಬಿಡತ್ತೆ. ಇದಕ್ಕೆ ಒಂದು ವೈದೃಶ್ಯವೆಂಬಂತೆ ಊರ್ಮಿಳಾ ಹೇಳುತ್ತಾಳೆ : ನಾನು ಸಿಟಿ ಹುಡುಗಿ, ನನಗೆ ಇದೆಲ್ಲ ಗೊತ್ತಾಗಲ್ಲ . . . ನನಗೆ ಈ ಕೆಲಸ ಲಕ್ಷುರಿ, ನಿನಗೆ ಇದೇ ಜೀವನಾ . . . .
ಒಮ್ಮೆ ಜಗನ್ನಾಥನಾಗಿದ್ದು ಈಗ ಒಬ್ಬ ಪ್ರಭಾವಿ `ಗುರು‘ವಾಗಿರುವ ಜಕ್ಕೂಜಿ ಗೆಳೆತನದ ಸಲಿಗೆಯಲ್ಲಿ ಆದರೆ ಗೀತೋಪದೇಶದ ಧಾಟಿಯಲ್ಲಿ ಸಂಜಯನಿಗೆ ಹೇಳುವ ಮಾತುಗಳಲ್ಲಿ ಆಧುನಿಕ ನಗರಜೀವನ ಸ್ವರೂಪದರ್ಶನವೇ ಆಗುವಂತಿದೆ : ನೀನು ಅದೇ ನಮ್ಮೂರಿನ ಗುಡಿಗಾರ ಗಲ್ಲಿಯ ಸಂಜೂ ಆಗಿ ಇರ್ತೀನಿ ಅಂದ್ರೆ ಇಲ್ಲಿ ಬದುಕಕ್ಕೆ ಆಗಲ್ಲ. ಮೊದಲು ಬೇರು ಬಿಡಿಸಿಕೋಬೇಕು. ಹಗುರಾದರೆ ಮಾತ್ರ ತೇಲಕ್ಕೆ ಆಗೋದು. ಈ ಸಿಟಿ ಹುಡುಗ್ರನ್ನ ನೋಡು. ಅವರಿಗೆ ಏನಾದ್ರೂ ಭಾರ ಇದೆಯಾ. ಮಾತೃಭಾಷೆಯ ಭಾರವಿಲ್ಲ. ಸಮಾಜ ಸುಧಾರಣೆಯ ಭಾರವಿಲ್ಲ. ರಾಜಕೀಯದ ಭಾರವಿಲ್ಲ. ಸಾಮಾಜಿಕ ನ್ಯಾಯದ ಭಾರವೂ ಇಲ್ಲ. ನಮಗೆ? ರಾವ್ ಮಾಸ್ತರು ತಲೆಯಲ್ಲಿ ತುಂಬಿದ್ದನ್ನು ತೆಗೆಯಕ್ಕೇ ಆಗ್ತಾ ಇಲ್ಲ. ಅವರೆಲ್ಲ ಕಾಲ್ ಸೆಂಟರ್ಗೆ ಹೋಗಿ ರಾಬರ್ಟೋ ಸ್ಟೀವೋ ಆಗಿ ಕೆಲಸಾ ಮಾಡಿ ಮನೆಗೆ ಬಂದು ರಾಮುನೋ ರಾಘುನೋ ಆಗಿರ್ತಾರೆ. ಇಲ್ಲಿ ಕಳಚಿಕೋಬೇಕು. ಅಂಟಿಕೋಬಾರದು. ರಸ್ತೆ ಮೇಲೆ ಯಾರೋ ಸಾಯ್ತಾ ಬಿದ್ದಿದ್ದರೂ ಮುಖ ತಿರುಗಿಸಿ ನಡೆಯಲು ಕಲೀಬೇಕು. ಮತ್ತು ಅಂಥವರನ್ನು ಎತ್ತತಾರಲ್ಲ. ಆ ಸಂಘದವರಿಗೆ ಚಾರಿಟಿ ಅಂತ ಹಣ ಕೊಡಬೇಕು. ಅದು ನಮ್ಮ ಮನಸ್ಸಿನ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ.
ತನ್ನ ಮೊದಲಿನ ಅಸ್ಮಿತೆಯನ್ನು ಕಳಚಿಕೊಂಡು ಒಬ್ಬ `ಗುರು‘ವಾಗಿ ಅವಸ್ಥಾನಗೊಂಡು ಬೆಂಗಳೂರಿನಲ್ಲಿ `ಯಶಸ್ವಿ‘ಯಾಗಿರುವ ಜಕ್ಕೂಜಿಗೆ ತನ್ನ ಸದ್ಯದ ಜೀವನ ಕ್ರಮ ಮೋಸದ್ದು ಅನ್ನಿಸುವುದೇ ಇಲ್ಲ. ನಗರಜೀವನದ ಇನ್ನೊಂದು ಮುಖವನ್ನು ಸೂಚಿಸುತ್ತ ಅವನು ಒಂದು ವರ್ಗದ ಮಹಿಳೆಯರ ಸಮಸ್ಯೆಗೆ ತಾನು ಕೊಡುತ್ತಿರುವ `ಪರಿಹಾರ‘ ಅವರನ್ನು ಕಾಡುತ್ತಿರುವ ಶೂನ್ಯದ ಬೇಸರ ಸ್ಥಿತಿಗೆ ಔಷಧಿವೆಂಬಂತಿದೆ ಎಂಬುದನ್ನು ಕಂಡುಕೊಂಡಿದ್ದಾನೆ. ಅವರ ಬೇಸರಕ್ಕೆ ಸ್ಪಂದಿಸೋದಕ್ಕೆ ಅವರ ಗಂಡಂದಿರು-ಮಕ್ಕಳಿಗೆ ಪುರುಸೊತ್ತೇ ಇಲ್ಲದ ಸಂದರ್ಭದಲ್ಲಿ ಅವರ ಗೋಳುಗಳಿಗೆ ತಾನು ಕಿವಿಯಾದೆ ; ಅಷ್ಟೇ ಸಾಲದು ಎಂದು ಅದಕ್ಕೊಂದಷ್ಟು ಧ್ಯಾನ-ಯೋಗ ಬೆರೆಸಿದೆ; ಬೇಕಾದರೆ ಒಂಥರಾ ಎಮೋಶನಲ್ ಫಿಟ್ನೆಸ್ ಸೆಂಟರ್ ಅಂತಾ ಇಟ್ಟುಕೋ ಅಂತ ಅವನು ತನ್ನ ಗೆಳೆಯ ಸಂಜಯನಿಗೆ ಹೇಳುತ್ತಾನೆ. ತನ್ನ ಅಪ್ಪ ಜೋಯಿಸರಾಗಿದ್ದರು. ಅವರ ಬಳಿಯೂ ಜನ ಕಷ್ಟ-ಸುಖ ಹೇಳಿಕೊಂಡು ಎರಡು ತಿಳುವಳಿಕೆಯ ಮಾತು ಕೇಳಿಕೊಂಡು ದಕ್ಷಿಣೆ ಕೊಟ್ಟು ಹೋಗುತ್ತಿದ್ದರು. `ನಾನು ನನ್ನ ಕುಟುಂಬ ವೃತ್ತಿಯನ್ನು ಬೇರೆ ಥರಾ ಮುಂದುವರಿಸಿಕೊಂಡು ಹೋಗ್ತಿದ್ದೇನೆ ಜನರಿಗೆ ನೆಮ್ಮದಿಯನ್ನು ಮಾರ್ತಿದ್ದೇನೆ‘ ಎಂದು ಜಕ್ಕೂಜಿ ಹೇಳುತ್ತಾನೆ.
ಸಂಜಯನ ಬಾಸ್ `ಕರ್ನಾಟಕ ಧ್ವನಿ‘ ಪತ್ರಿಕೆಯ ಸಂಪಾದಕ ಬಿರಾಜದಾರನಿಗೆ `ಯಶಸ್ವಿ‘ ಪತ್ರಿಕೋದ್ಯಮವೆಂದರೆ, ಎಲ್ಲಾನೂ ಉತ್ಸಾಹದಿಂದ ನೋಡೋದು; ನೀರಸ ಘಟನೆಗಳನ್ನು, ವಿವರಗಳನ್ನು ರೋಚಕ `ಸ್ಟೋರಿ‘ಗಳನ್ನಾಗಿ ಪರಿವರ್ತಿಸುವುದು. ಸಂಜಯನಿಗೆ ಅಂತ ದಿನಾ ಅನತಿದ್ರ ಹಾಂಗ ಕಾಣಸತೈತಿ. ಈ ಸ್ವರ್ಗದಾಗ ನಿನ ಮಾರಿ ಚರ್ಮ ಹೊಳಿಯೂ ಹಾಂಗ ಮಾಡೋ ಕ್ರೀಮ್ ಹಚಿಗೋ ಅಂದ್ರ ಅದಕ್ಕೊಂದ ಅರ್ಥ ಇರತೈತಿ. ಪೇಜ್ ತುಂಬಾ ನಷ್ಟಪಂಚಾಂಗ ಇದ್ದರ, ಆ ಸೂತಕದ ಮನಿಯಾಗ ಸಿಹಿ ಮಾರಲಿಕ್ಕಾಗತೈತೇನು? ಸ್ಲಂ ಒಳಗ ವಜ್ರದ ಒಡವಿ ಜಾಹೀರಾತು ಹಾಕಲಿಕ್ಕೆ ಯಾರಾದರೂ ರೊಕ್ಕ ಕೊಡತಾರೇನು? ಇದೂ ಹಾಂಗ. . . ಛಲೋ ಛಲೋ ಜಾಹೀರಾತು ಸಿಗತಾವ. . . . . ಫುಟ್ ಬಾಲ್ ಕಪ್ ಗೆದ್ದರ ಆ ದೇಶದ ಮಾರುಕಟ್ಟಿ ಬೆಳೀತದಂತ. ಯಾಕ? ನಿರಾಳ ಮನಸ್ಥಿತಿಯೊಳಗ ಜನಾ ಹೆಚ್ಚು ಖರ್ಚು ಮಾಡತಾರ. ಸಮಾಜ, ಮತ್ತ ಮುಖ್ಯವಾಗಿ ನಮ್ಮ ಓದುಗರ ಸ್ವಾಸ್ಥ್ಯ. ನಾವು ನೋಡಿಕೋ ಬೇಕಲ್ಲ‘.
ನಾಟಕದ ಇನ್ನೊಂದು ಮುಖ್ಯ ಪಾತ್ರವಾದ ಶೇಖರ ಶ್ರೀರಂಗಪಟ್ಟಣದವನು. ಅವನ ತಂದೆ ಅಲ್ಲಿ ಟೂರಿಸ್ಟ್ ಗೈಡ್ ಆಗಿದ್ದರು. ಇತಿಹಾಸ ಚೆನ್ನಾಗಿ ಗೊತ್ತಿತ್ತು. ಅದನ್ನೇ ತಮ್ಮ ಮಗನಿಗೆ ಕತೆಯಾಗಿ ಹೇಳುತ್ತಿದ್ದರು. ಇವನು ಅಪ್ಪನಿಗಿಂತ ಚೆನ್ನಾಗಿ ಕತೆ ಹೇಳೋದು ಕಲಿತ. ರೋಚಕವಾಗಿ ಹೇಳಬೇಕೂಂತ ಇಲ್ಲದೇ ಇರೋದನ್ನೂ ಸೇರಿಸತಾ ಇದ್ದೆ. . . . ಅದೇ ನನಗೆ ಅಭ್ಯಾಸವಾಗಿ ಹೋಯಿತು. ಹೊಸ ಹೊಸ ಕತೆ ಹುಟ್ಟಿಸಿ ಹೇಳೋದು. ಇವನೂ ಈಗ ಬೆಂಗಳೂರಿಗೆ ಬಂದಿದ್ದಾನೆ. ಬದುಕಲು ದುಡ್ಡು ಬೇಕು. ಅದಕ್ಕಾಗಿ ಉದ್ಯೋಗ ಬೇಕು. ಕತೆ ಕಟ್ಟಿ ಹೇಳುವ, ನಟಿಸುವ ಉದ್ಯೋಗ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ.
ಈ ಎಲ್ಲಾ ಪಾತ್ರಗಳನ್ನೂ ಸನ್ನಿವೇಶಗಳನ್ನೂ ಪರಸ್ಪರ ಬೆಸೆಯುವ ಸಂಗತಿಯೊಂದು ನಾಟಕದಲ್ಲಿ ನಡೆಯುತ್ತದೆ. ಬಿರಾಜದಾರನು `ತಲಿ ಮ್ಯಾಲ ಹೊಡಿಯುವಂಥಾ‘ ಒಂದು `ಸ್ಟೋರಿ‘ಗಾಗಿ ಸಂಜಯನನ್ನು ಪೀಡಿಸುತ್ತಾನೆ. ಅದರ ಒತ್ತಡ-ಆತಂಕಗಳಲ್ಲಿರುವ ಸಂಜಯನಿಗೆ ಶೇಖರ ಆಕಸ್ಮಿಕವಾಗಿ ಸಿಕ್ಕಿ ತಾನು ಕೆಂಪೇಗೌಡನ ವಂಶಸ್ಥನೆಂದು ನಂಬಿಸಿ ಸ್ವಲ್ಪ ಹಣವನ್ನೂ ಕಸಿದುಕೊಂಡು ಇನ್ನೂ ಹೆಚ್ಚಿನ ಪುರಾವೆಗಳನ್ನು ಒದಗಿಸುವುದಾಗಿ ವಚನವೀಯುತ್ತಾನೆ. ಸಂಜಯನ ನವರಸಭರಿತ ಸ್ಟೋರಿ ಪತ್ರಿಕೆಯಲ್ಲಿ ಪ್ರಕಟವಾಗಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ತನ್ನ ಪ್ರಭಾವದಿಂದ ಜಕ್ಕೂಜಿ ಸಂಜಯನನ್ನು ಹೊಸ ಸಂಕಷ್ಟದಿಂದ ಪಾರು ಮಾಡುತ್ತಾನೆ. ವಿವೇಕರು ಈ ಪ್ರಸಂಗವನ್ನೇ ದೊಡ್ಡದು ಮಾಡದೆ ಇಲ್ಲವೇ ರೋಚಕಗೊಳಿಸದೆ ಈ ಘಟನೆಯ ಮೂಲಕ ಒಂದು ನಾಗರೀಕತೆಯ ಒಳಸ್ವರೂಪವನ್ನೇ ತಮ್ಮ ನಾಟಕದ ಮೂಲಕ ನಮ್ಮೆದುರು ತೆರೆದಿಡುವಲ್ಲಿ ಸಾಕಷ್ಟು ಸಫಲರಾಗಿದ್ದಾರೆ.
- ಟಿ.ಪಿ.ಅಶೋಕ
ಶೀರ್ಷಿಕೆ: ಬಹುಮುಖಿ ಲೇಖಕರು: ವಿವೇಕ ಶಾನಭಾಗ ಪ್ರಕಾಶಕರು: ಅಕ್ಷರ ಪ್ರಕಾಶನ ಹೆಗ್ಗೋಡು ಪುಟಗಳು:60 ಬೆಲೆ: ರೂ.45/-