ಪುಟಗಳು

ಬಡವರ ಜಾತಿಗಣತಿ; ಸರಕಾರದ ದ್ವಂದ್ವ ನೀತಿ

ಬಡತನ ಆಧಾರಿತ ಜಾತಿಗಣತಿಯನ್ನು ಇದೇ 2011 ಜೂನ್ನಿಂದ ಡಿಸೆಂಬರ್ವರೆಗೆ ನಡೆಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿರುವುದು ವರದಿಯಾಗಿದೆ.ಸಾಮಾಜಿಕ-ಆರ್ಥಿಕ ವಿವರಗಳನ್ನೊಳ ಗೊಂಡ ಜಾತಿಗಣತಿ ನಡೆಸುವ ನಿರ್ಧಾರವು ವಿರೋಧ ಪಕ್ಷಗಳಿಗೆ ಸರಕಾರವು ಸಂಸತ್ತಿನಲ್ಲಿ ನೀಡಿದ ಭರವಸೆ ಸಂಪೂರ್ಣವಾಗಿ ಈಡೇರಿಸಿ ದಂತಾಗಿದೆ ಎಂದು ಸರಕಾರದ ವಕ್ತಾರರೊಬ್ಬರು ಹೇಳಿಕೆ ನೀಡಿರುವುದು ಕೆಳಕಂಡ ಕಾರಣ ಗಳಿಂದಾಗಿ ವಾಸ್ತವಕ್ಕಿಂಥ ಭಿನ್ನವಾಗಿದೆ.ಸಂವಿಧಾನದ ಅನುಚ್ಛೇದ 15(4) ಪ್ರಕಾರ, ಹಿಂದುಳಿದಿರುವಿಕೆಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳನ್ನಿಟ್ಟುಕೊಂಡು ಮೌಲ್ಯ ಮಾಪನ ಮಾಡಬೇಕೆ ಹೊರತು ಕೇವಲ ಬಡತನದ ಆರ್ಥಿಕ ಮತ್ತು ವರಮಾನದ ಅಳತೆ ಗೋಲಿನಿಂದಲ್ಲ.
ಈಗ ತಾನೇ ಮುಕ್ತಾಯಗೊಂಡ, ಹತ್ತು ವರ್ಷಗಳಿಗೊಮ್ಮೆ ನಡೆಯುವ ಸಾಮಾನ್ಯ ಜನಗಣತಿಯಲ್ಲಿಯೇ ಜಾತಿಯನ್ನು ಎಣಿಕೆ ಮಾಡಬೇಕೆಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರು, ರಾಷ್ಟ್ರಾದ್ಯಂತ ಅನೇಕ ಬುದ್ಧಿಜೀವಿ ಗಳು, ಸಮಾಜಶಾಸ್ತ್ರಜ್ಞರು, ಜನಪರ ಚಳವಳಿ ಗಳ ಮುಖಂಡರು ಆಗ್ರಹಿಸಿದ್ದು, ಆನಂತರ ಸರಕಾರ ಜಾತಿಗಣತಿಯನ್ನು ಪ್ರತ್ಯೇಕವಾಗಿ ನಡೆಸಲು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದ್ದನ್ನು ಇಲ್ಲಿ ಗಮನಿಸಬಹುದು. ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಒಮ್ಮೆಗೇ ಮಾಡುವುದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ದತ್ತಾಂಶಗಳು ಮತ್ತು ಡೆಮಾಗ್ರಫಿಕ್ ಕುರಿತ ದತ್ತಾಂಶಗಳಲ್ಲಿ ಕಂಡು ಬರುವ ಪರಸ್ಪರ ಸಂಬಂಧಗಳನ್ನು ಸುಲಭವಾಗಿ ಗುರುತಿಸಬಹು ದಿತ್ತು. ಜನಗಣತಿಯ ಜೊತೆಗೆ ಜಾತಿಗಣತಿ ಯನ್ನು ಕೈಗೊಂಡಿದ್ದರೆ ಫಲವತ್ತತೆ, ವಿವಾಹ ಮತ್ತು ಕೌಟುಂಬಿಕ ವಿವರಗಳು, ಮರಣ ಪ್ರಮಾಣ, ಸಾಕ್ಷರತೆ, ಶೈಕ್ಷಣಿಕ ಅರ್ಹತೆ ಮತ್ತು ಸಾಧನೆ, ಉದ್ಯೋಗ, ಉದ್ಯೋಗ ಲಕ್ಷಣಗಳು, ನಿರುದ್ಯೋಗ ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿತ್ತು.
ಮಾಹಿತಿಯೊಂದಿಗೆ ಸಾಮಾಜಿಕ ಮತ್ತು ಶೈಕ್ಷ ಣಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ವಿವಿಧ ನೀತಿಗಳನ್ನು ಜಾರಿಮಾಡಲು ಅನುಕೂಲವಾಗುತ್ತಿತ್ತು. ಇಂತಹ ಮಾಹಿತಿಯು ಆಗಾಗ್ಗೆ ಹಿಂದುಳಿದ ಜಾತಿಗಳನ್ನು ಗುರುತಿಸಲು ಹಾಗೂ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಸರಕಾರಕ್ಕೆ ಸಹಾಯವಾಗುತ್ತಿತ್ತು. ಆದರೆ ಈಗ ಸರಕಾರವು ಉದ್ದೇಶಿಸಿರುವ ಬಡತನ ಆಧಾರಿತ ಜಾತಿ ಗಣತಿ ಮೇಲಿನ ಉದ್ದೇಶಗಳಿಗೆ ವಿರುದ್ಧವಾ ಗಿದೆ.ಇಷ್ಟಾಗಿಯೂ ಉತ್ತಮ ತರಬೇತಿ ಹೊಂದಿ ರುವ ಗಣತಿ ಎಣಿಕೆದಾರರು ಹಾಗೂ ದೇಶಾ ದ್ಯಂತ ಇರುವ ವ್ಯವಸ್ಥಿತ ಗಣತಿ ಸಂಸ್ಥೆ ಮತ್ತು ಅದರ ಆಯುಕ್ತರು ಇದರಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ವಿವಿಧ ರಾಜ್ಯ ಸರಕಾರಗಳ ಪಂಚಾಯತ್ ನೌಕರರು, ಪಟ್ವಾರಿ ಗಳು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜ ನೆಯ ಕೆಲಸಗಾರರಿಂದ ಇದನ್ನು ನಡೆಸಲು ಉದ್ದೇಶಿಸಲಾಗಿದೆ. ಇಂತಹ ಸಮೀಕ್ಷೆಯಿಂದ ನಿಗದಿತ ಸಮಯ ಮಿತಿಯೊಳಗೆ ನಂಬಲರ್ಹ ಹಾಗೂ ವಿಶ್ವಾಸಾರ್ಹ ಮಾಹಿತಿ ದೊರೆಯು ವುದು ಸಾಧ್ಯವಿಲ್ಲ.
ಜಾತಿಗಣತಿಯ ಮಾಹಿತಿಯನ್ನು, ಕೈಯಲ್ಲಿ ಹಿಡಿದು ಬಳಸಬಹುದಾದ ಸಣ್ಣಗಾತ್ರದ ಕಂಪ್ಯೂ ಟರ್(ಸಿಂಪ್ಯೂಟರ್) ಸಹಾಯದಿಂದ ಮಾಡ ಲಾಗುತ್ತಿದೆ. ಮಾಹಿತಿಯನ್ನು ನಂತರ ಗಣತಿ ದಾರ ಸ್ಕ್ಯಾನ್ಮಾಡಿದ ಜನಸಂಖ್ಯಾ ನೋಂದ ಣಿಯ ಮಾಹಿತಿಯೊಂದಿಗೆ ತುಂಬಲಾಗುತ್ತದೆ ಎಂದು ಹೇಳಲಾಗಿದೆ. ಕುರಿತು ಸ್ಪಷ್ಟ ಮಾಹಿ ತಿಗಳು ಇಲ್ಲದಿರುವುದು ಅನೇಕ ಗಂಭೀರ ಪ್ರಶ್ನೆ ಗಳಿಗೆ ಆಸ್ಪದಕೊಡುವಂತಿದೆ. ಹತ್ತಾರು ಸಾವಿರ ಕಂಪ್ಯೂಟರ್ಗಳು ದೇಶದ ವಿಭಿನ್ನ ಪ್ರದೇಶ ಮತ್ತು ಪರಿಸ್ಥಿತಿಗಳಲ್ಲಿ ಅಸಂಖ್ಯಾತ ಅನನುಭವಿ ಕಾರ್ಯಕರ್ತರ ಕೈಯಲ್ಲಿ ನಿಖರವಾಗಿ ಕೆಲಸ ಮಾಡುವುದು ಕಷ್ಟಸಾಧ್ಯವಾದುದು ಎಂಬುದಕ್ಕೆ ಹಿಂದಿನ ಅನುಭವಗಳು ಇದಕ್ಕೆ ನಿದರ್ಶನವಾಗಿವೆ.
ಈಗಷ್ಟೇ ಮುಕ್ತಾಯಗೊಂಡ ದಶವಾ ರ್ಷಿಕ ಜನಗಣತಿಯಲ್ಲೂ ಬಗೆಯ ವಿಶ್ವಾಸಾ ರ್ಹವಲ್ಲದ ವಿಧಾನವನ್ನು ಬಳಸದೆ ಮುದ್ರಿತ ಕಾಗದದ ನಮೂನೆಗಳನ್ನು ಮಾತ್ರ ಬಳಸಲಾಗಿತ್ತು ಎನ್ನುವುದನ್ನು ಗಮನಿಸಿದರೆ ಸಾಕು ಇದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ. ಇಷ್ಟಲ್ಲದೆ ಜಾತಿ ಮತ್ತು ಧಾರ್ಮಿಕ ಮಾಹಿತಿಯನ್ನು ಗೌಪ್ಯವಾಗಿಡಲು ಸರಕಾರ ತೀರ್ಮಾನಿಸಿದೆ. ಸರಕಾರ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳದೆ, ಗೊಂದಲಮಯ ಹೇಳಿಕೆಗಳನ್ನು ನೀಡುತ್ತಾ, ತನ್ನ ನಿಲುವುಗಳನ್ನು ಬದಲಿಸುತ್ತಾ, ಕೊಟ್ಟ ಭರವಸೆಗಳನ್ನು ತಿರುಚುತ್ತಾ ಇರುವ - ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಜಾತಿಗಣತಿಯ ಕುರಿತು ಸರಕಾರದ ಪ್ರಾಮಾಣಿಕತೆ ಮತ್ತು ಉದ್ದೇಶ ಪೂರ್ಣತೆಯ ಬಗ್ಗೆ ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಡುವುದಲ್ಲದೆ, ಜಾತಿಗಣತಿಯನ್ನು ಹೇಗಾದರೂ ಮಾಡಿ ನಾಶಗೊಳಿಸಬೇಕೆಂದು ಮೊದಲಿನಿಂದಲೂ ಸಾಮಾಜಿಕ ನ್ಯಾಯದ ವಿರುದ್ಧವಿರುವ ಶಕ್ತಿಗಳ ಜೊತೆಯಲ್ಲಿ ಆಳುವ ವರ್ಗ ಕೂಡ ಕೈಜೋಡಿಸಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.
-
ಡಾ.ಎಸ್.ಜಾಫೆಟ್
ಪ್ರಾಧ್ಯಾಪಕರು ಮತ್ತು ನಿರ್ದೇಶಕರು
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ,
ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆನಾಗರಬಾವಿ, ಬೆಂಗಳೂರು -560 072