ಪಕ್ಕದಲ್ಲಿದೆ ಜುಲೈ ತಿಂಗಳ ಕರವೇ ನಲ್ನುಡಿ. ಅಮಾವಾಸ್ಯೆಯ ರಾತ್ರಿಯಲ್ಲಿ ಹೊಳೆಯುವ ತಾರೆಗಳಂತೆ ಕಪ್ಪು ಹಿನ್ನೆಲೆಯಲ್ಲಿ ಬಣ್ಣಬಣ್ಣದ ಫೋಟೋಗಳಿರುವ ವಿನ್ಯಾಸ ಮತ್ತು ಕಲೆಯ ಮುದ್ರಣದ ಮುದ್ದಾದ 'ಮುಖಪುಟ'. ಮುಖವನ್ನು ಆಚೀಚೆ ಅಲ್ಲಾಡಿಸಲು ಬಿಡದಂತೆ ಚಿತ್ರಗಳಿಗೆ ಹೊಂದಿಕೊಂಡ 'ಶೀರ್ಷಿಕೆಗಳು'. ಆಹಾ!... ನಮಗೇಕೆ ಎರಡೇ ಎರಡು ಕಣ್ಣುಗಳು ಎನಿಸದಿರದು.
ಮೊದಲ ಪುಟದಲ್ಲಿ, ಪ್ರಸ್ತುತ ವಿದ್ಯಮಾನದ ವಿಷಯಕ್ಕೆ ಸಂಬಂಧಿಸಿದ, ವಿಶೇಷ ಅಧ್ಯಯನದಿಂದ ಮಂಡಿಸಲ್ಪಟ್ಟ, ಸಾಮಾಜಿಕ ಕಳಕಳಿಯಿಂದ ಕೂಡಿದ ದೂರದೃಷ್ಟಿಯುಳ್ಳ ಸಂಪಾದಕಿ ವಿಶಾಲಾಕ್ಷಿ ಅವರ ಸಂಪಾದಕೀಯ. 'ಒಳಪುಟಗಳಲ್ಲಿ ಏನೇನಿದೆ' ಎಂಬ ವಿವರಣೆ ಸಂಪಾದಕೀಯದ ಮುಂದಿನ ಪುಟದಲ್ಲಿ. ಅದು ಹತ್ತಿಯ ಮೇಲಿರುವ ಹವಳದಂತೆ. ಏನಿಲ್ಲ, ಏನಿದೆ ಅಂತ ನೋಡ ಹೊರಟರೆ ಅದೊಂದು ಫುಲ್ ಮೀಲ್ಸ್. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವ ಟಿ. ಎ. ನಾರಾಯಣಗೌಡರ 'ನೇರನುಡಿ' ಯಿಂದ ಪ್ರಾರಂಭವಾಗಿ ಸಮಾಜಮುಖಿ 'ಒಡಲನುಡಿ' ಯೊಂದಿಗೆ ಕೊನೆಗೊಳ್ಳುವ ಈ ಮಾಸಿಕ ನಿಜವಾಗಿಯೂ ಒಂದು ಅಚ್ಚರಿ, ಅಮೂಲ್ಯ ರತ್ನ.
ಈ ಸಂಚಿಕೆಯ ಒಳಪುಟಗಳಲ್ಲಿ ಡಾ.ದೊಡ್ಡರಂಗೇಗೌಡ ಅವರ " ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು " ಎಂಬ ಅನುಭವದ ಹೊನ್ನುಡಿ. ಅಪ್ಪಗೆರೆ ತಿಮ್ಮರಾಜುರವರ " ಮೂಲ ಜಾನಪದ ಕಲಾವಿದರ ದುಃಖ ದುಮ್ಮಾನಗಳು ಎಂಬ ಸ್ವಾನುಭವದ ಹಿನ್ನೆಲೆಯಿಂದ ಮೂಡಿರುವ ಜಾನಪದ ಕಲಾವಿದರ ಜೀವನದ ಅನಾವರಣ. ಕರ್ನಾಟಕ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ ಅವರನ್ನು ಕುರಿತ ಬರಹ. 'ಸ್ವಾಮಿಗಳು ಮಠದಲಿಲ್ಲ' ಎಂಬ ತೀರ್ಪುಗಾರರ ಮೆಚ್ಚುಗೆ ಪಡೆದಿರುವ ಕಥೆ, ಡಾ. ಜಿ.ಎಂ. ಹೆಗಡೆಯವರ ಕನ್ನಡ ಪರಿಚಾರಿಕೆ, ಕಲೆ, ಕಾವ್ಯ, ವೈಚಾರಿಕ ಲೇಖನ. ರಂಗನುಡಿ ಹೀಗೆ ಒಂದೇ ಎರಡೇ! ಸಾಕಷ್ಟು ಸಾಧ್ಯತೆಗಳ ಸಂಗ್ರಹ ಈ ಮಾಸಿಕ.
ಹಿಂದಿನ ಸಂಚಿಕೆಯನ್ನು ಹುಡುಕುವಂತೆ, ಮುಂದಿನ ಸಂಚಿಕೆಯನ್ನು ಕಾಯುವಂತೆ ಮಾಡಿರುವ ಈ ಸಂಚಿಕೆ ಈಗ ದಿನವಿಡೀ ಕಾಡುತ್ತಿರುವುದೂ ನಿಜ! ಮಾಡಲೇಬೇಕಾಗಿರುವ ಮಾಧ್ಯಮಗಳ ಕೆಲವು ಕರ್ತವ್ಯಗಳಿಗೇ ಇದು ಒಂದು ಕನ್ನಡಿ, ಮಾಡಬೇಕಾಗಿರುವ ಕೆಲಸಗಳಿಗೆ ಮನ್ನುಡಿಯೂ ಎನ್ನಬಹುದು.
'ಕರ್ನಾಟಕ ರಕ್ಷಣಾ ವೇದಿಕೆ'ಯಿಂದ ಹೊರಬರುತ್ತಿರುವ ಈ ಮಾಸಿಕ ಕರ್ನಾಟಕದ ಜನರಿಗೆ ಇದರಲ್ಲಿರುವ ವೈವಿಧ್ಯಮಯ ಬರಹಗಳ ಮೂಲಕ 'ರಕ್ಷಣೆಯ' ಬೆಚ್ಚನೆ ಭಾವವನ್ನು ಕೊಡುತ್ತಿರುವುದು ಮೆಚ್ಚಲೇಬೇಕಾದ ಅಂಶ. ಮುಂದಿನ ಸಂಚಿಕೆಗಳಲ್ಲೂ ಇದೇ ವೈವಿಧ್ಯತೆ, ಕಾಳಜಿ ಇರಲೆಂದು ಆಶಿಸುವ ಕರ್ನಾಟಕದ ಜನತೆಗೆ ನಿರಾಶೆಯಾಗಲಾರದೆಂದು ನಾವೂ ಆಶಿಸುತ್ತೇವೆ