ಪುಟಗಳು

ವಿವಾಹಿತ ವ್ಯಕ್ತಿಗಳ ಅಕ್ರಮ ಸಂಬಂಧ ಸಮ್ಮತವಲ್ಲ:ಕೋರ್ಟ್

ಮುಂಬೈ, ಜು 12: ಇಬ್ಬರು ವಿವಾಹಿತ ವ್ಯಕ್ತಿಗಳಿಗೆ ಅನೈತಿಕ ವೈವಾಹಿಕ ಸಂಬಂಧವಿರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ ಎಂದು ಮುಂಬೈ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವ್ಯಭಿಚಾರ ದಂಡನಾರ್ಹವಾಗಿರುವ ಐಪಿಸಿ ಸೆಕ್ಷನ್‌ 497ರ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಗರದ ಉದ್ಯಮಿಯೊಬ್ಬರು ಹೂಡಿದ ದಾವೆಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿ, ಈ ತೀರ್ಪು ನೀಡಿದೆ.

ವ್ಯಭಿಚಾರ ವಿವಾಹದ ಪವಿತ್ರತೆಗೆ ವಿರುದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ವ್ಯಭಿಚಾರ ದಂಡನಾರ್ಹ ಅಲ್ಲವೆಂದು ಮಾಡಿದರೆ ಅನೈತಿಕ ವೈವಾಹಿಕ ಸಂಬಂಧಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಡಿದಂತಾಗುತ್ತದೆ. ಇದು ವಿವಾಹ ಸಂಬಂಧದ ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಭಾಗೀಯ ನ್ಯಾಯಪೀಠದ ಜಸ್ಟೀಸ್‌ ಬಿ.ಎಚ್‌. ಮರ್ಲಪಳ್ಳೆ ಮತ್ತು ಯು.ಡಿ.ಸಾಳ್ವಿ ಅಭಿಪ್ರಾಯಪಟ್ಟರು.

ವಿವಾಹಿತ ಪರ ಸ್ತ್ರೀಯೊಂದಿಗೆ ಅನೈತಿಕ ಸಂಬಂಧವಿರಿಸಿದ ಆರೋಪದಲ್ಲಿ 497 ಸೆಕ್ಷನ್‌ ಪ್ರಕಾರ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿರುವ ಈ ಉದ್ಯಮಿ ಅರ್ಜಿ ಹೂಡಿದ್ದರು. ಪ್ರೌಢ ವ್ಯಕ್ತಿಯೊಂದಿಗೆ ಸಹಮತದ ಲೈಂಗಿಕ ಸಂಬಂಧ ಬೆಳೆಸುವುದು ಜೀವನದ ಮೂಲಭೂತ ಹಕ್ಕಾಗಿದೆ ಎಂದು ಅವರು ವಾದಿಸಿದ್ದರು.

ಐಪಿಸಿ ಸೆಕ್ಷನ್‌ 497 ವ್ಯಕ್ತಿಯ ಸಂವಿಧಾನಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಮಂಡಿಸಿದ ವಾದಗಳಲ್ಲಿ ನಮಗೆ ಯಾವುದೇ ದೃಢವಾದ ಆಧಾರ ಸಿಕ್ಕಿಲ್ಲ. ವ್ಯಭಿಚಾರ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಅಪರಾಧವಾಗಿದೆ‌ ಎನ್ನುವ ಕಾರಣಕ್ಕೆ ಮಾತ್ರ ಐಪಿಸಿ 497 ಸೆಕ್ಷನ್‌ ಅನ್ನು ಅಸಿಂಧು ಮಾಡಲಾಗದು ಎಂದು ಮರ್ಲಪಳ್ಳೆ ಹೇಳಿದರು