ಪುಟಗಳು

ಅನಂತ ಗುಪ್ತ ನಿಧಿ: ಕಾಡತೊಡಗಿದೆ ಸಂರಕ್ಷಣೆಯ ಭೀತಿ


ತಿರುವನಂತಪುರಂ, ಜುಲೈ 4: ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸಂಪತ್ತನ್ನು ಸಂರಕ್ಷಿಸುವುದು ಹೇಗೆಂಬುದು ಈಗ ಎಲ್ಲರ ಚಿಂತೆಯ ವಿಷಯ.

ರಹಸ್ಯ ಕೊಠಡಿಯ ತೆರೆಯುವ ತನಕ ಈ ದೇವಸ್ಥಾನಕ್ಕೆ ಸಾಧಾರಣವಾದ ಬಂದೋಬಸ್ತಿನ ವ್ಯವಸ್ಥೆಯಿತ್ತು. ಆದರೆ ಈಗ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಸುದೀರ್ಘ‌ ಕಾಲ ಸಂಪತ್ತನ್ನು ರಕ್ಷಿಸಿಡಬೇಕಾದ ಚಿಂತೆ ಸರಕಾರವನ್ನು ಕಾಡುತ್ತಿದೆ. ಒಟ್ಟಾರೆ ಸುಮಾರು 1 ಲಕ್ಷ ಕೋಟಿ ರುಪಾಯಿ ಮೇಲ್ಪಟ್ಟು ಬೆಲೆಬಾಳುವ ಸಂಪತ್ತು ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿದೆ.

ಸುಪ್ರೀಂ ಕೋರ್ಟ್‌ ನೇಮಿಸಿರುವ ಏಳು ಸದಸ್ಯರ ಸಮಿತಿ ಸಂಪತ್ತಿನ ತಪಶೀಲು ಪಟ್ಟಿ ತಯಾರಿಸುತ್ತಿದ್ದು, ಶನಿವಾರದ ತನಕ ಸುಮಾರು 1 ಲಕ್ಷ ಕೋಟಿ ರು. ಸಂಪತ್ತು ಸಿಕ್ಕಿದೆ. ಭಾನುವಾರ ತಪಶೀಲು ಪಟ್ಟಿ ತಯಾರಿಸುವ ಪ್ರಕ್ರಿಯೆಗೆ ವಿರಾಮ ನೀಡಲಾಗಿದ್ದು, ಸೋಮವಾರ ಮುಂದುವರಿಯುತ್ತದೆ.

ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವಸ್ಥಾನವಾಗಿ ಮೂಡಿ ಬಂದಿರುವ ಹಿನ್ನೆಲೆಯಲ್ಲಿ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡುವ ಅಗತ್ಯವೂ ತಲೆದೋರಿದೆ. ಐತಿಹಾಸಿಕ ಮಹತ್ವವುಳ್ಳ ಈ ದೇವಾಲಯ ಮತ್ತು ಇಲ್ಲಿ ದೊರೆತಿರುವ ಭಾರಿ ಸಂಪತ್ತಿನ ಸಂರಕ್ಷಣೆ ಹೇಗೆ ಎನ್ನುವ ಪ್ರಶ್ನೆ ಇತಿಹಾಸಕಾರರು, ಪ್ರಾಧ್ಯಾಪಕರು ಹಾಗೂ ದೇವಾಲಯ ಸಂಸ್ಕೃತಿ ಕುರಿತ ಕುತೂಹಲಿಗಳನ್ನು ಕಾಡತೊಡಗಿದೆ.

ಸ್ವಾತಂತ್ರ್ಯಪೂರ್ವದ ಇತರ ಹಲವು ರಾಜಮನೆತನಗಳಲ್ಲಿ ಈ ರೀತಿ ಅಪಾರ ಪ್ರಮಾಣದ ಸಂಪತ್ತು ಇತ್ತು. ಆದರೆ ಅದು ದಾಳಿಕೋರರ ಪಾಲಾಗಿದೆ ಅಥವ ರಾಜಮನೆತನದವರೇ ಅವುಗಳನ್ನು ಬಳಸಿಕೊಂಡಿದ್ದಾರೆ. ಆದರೆ ಈ ಖಜಾನೆ ತಿರುವಾಂಕೂರು ಸಂಸ್ಥಾನವನ್ನಾಳಿದವರ ಪ್ರಾಮಾಣಿಕತೆ ಮತ್ತು ಸರಳತೆಯ ಸಂಕೇತದಂತಿದೆ. ಅವರು ಈ ಸ್ವತ್ತಿನಲ್ಲಿ ಏನೊಂದನ್ನೂ ತೆಗೆದುಕೊಂಡು ಹೋಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

'ಶತಮಾನಗಳಿಂದ ದೇವಾಲಯದ ನೆಲಮಾಳಿಗೆಯಲ್ಲಿದ್ದ ಈ ಭಂಡಾರವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು' ಎಂದು ಇತಿಹಾಸಕಾರ ಮತ್ತು ಲೇಖಕ ಎಂ.ಜಿ. ಶಶಿಭೂಷಣ್ ಹೇಳಿದ್ದಾರೆ.

ಈ ಸಂಪತ್ತನ್ನು ಬಹಳ ಎಚ್ಚರಿಕೆ ಹಾಗೂ ಕಾಳಜಿಯಿಂದ ಸಂರಕ್ಷಿಸಿಡಬೇಕೆಂದು ಇಂಡಿಯನ್‌ ಹಿಸ್ಟರಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನಾರಾಯಣನ್‌ ಸಹಿತ ಹಲವು ಇತಿಹಾಸಕಾರರು ಒತ್ತಾಯಿಸಿದ್ದಾರೆ. ಇದು ತಿರುವಾಂಕೂರು ರಾಜಮನೆತನದವರ ಆಧೀನದಲ್ಲಿರುವ ದೇವಸ್ಥಾನಕ್ಕೆ ಸಂಪತ್ತಾಗಿರುವುದರಿಂದ ಇಷ್ಟರ ತನಕ ಪಾಲಿಸಿಕೊಂಡು ಬಂದಿರುವ ಪರಂಪರೆಯ ಪ್ರಕಾರ ಸರಕಾರ ಅದನ್ನು ವಶಪಡಿಸಿಕೊಳ್ಳುವಂತಿಲ್ಲ. ಸರಕಾರದ ಆಧೀನಕ್ಕೊಳಪಟ್ಟ ದೇವಸ್ಥಾನಗಳು ದುರಾಡಳಿತದಿಂದ ನಾಶವಾಗಿರುವ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ. ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಈ ಗತಿಯಾಗಬಾರದು ಎಂದು ನಾರಾಯಣನ್‌ ಹೇಳಿದ್ದಾರೆ.

ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಕೆಲವೊಂದು ವಸ್ತುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇಡಬಹುದು. ಉಳಿದ ಸಂಪತ್ತನ್ನು ಸುರಕ್ಷಿತವಾಗಿ ಕಾಪಿಡಬೇಕೆಂದು ಅವರು ಸಲಹೆ ಮಾಡಿದ್ದಾರೆ.

1947ರ ಬಳಿಕ ಹೆಚ್ಚಿನೆಲ್ಲ ದೇವಸ್ಥಾನಗಳ ಆಡಳಿತವನ್ನು ತಿರುವಾಂಕೂರು ದೇವಸ್ವಂ ಬೋರ್ಡ್‌ಗೆ ಬಿಟ್ಟುಕೊಡಲಾಗಿದ್ದರೂ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ಮಾತ್ರ ರಾಜಮನೆತನದವರ ಆಧೀನದಲ್ಲಿತ್ತು.ಕೊನೆಯ ರಾಜ ಚಿತ್ತಿರಾ ತಿರುನಾಲ್‌ ಬಲರಾಮ ವರ್ಮ ಅವರನ್ನು ದೇವಸ್ಥಾನಗಳ ವಿಲಯನದ ಬಳಿಕ ರಾಜಪ್ರಮುಖರೆಂದು ಹೆಸರಿಸಿದರೂ ಅವರು ರಹಸ್ಯ ಕೊಠಡಿಗಳಲ್ಲಿರುವ ಸಂಪತ್ತನ್ನು ಮುಟ್ಟಿಲ್ಲ.

ಈ ನಡುವೆ ವಿಶ್ವಹಿಂದು ಪರಿಷತ್‌, ನಾಯರ್ ಸರ್ವಿಸ್‌ ಸೊಸೈಟಿ, ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಮುಂತಾದ ಸಂಘಟನೆಗಳು ಸಂಪತ್ತನ್ನು ಸರಕಾರ ವಶಪಡಿಸಿಕೊಳ್ಳಬಾರದು ಎಂದು ಎಚ್ಚರಿಸಿವೆ