ಪುಟಗಳು

ಅನಂತ ಪ್ರಶ್ನೆ: ಧರ್ಮ ಸಂಕಟದಲ್ಲಿ ಸುಪ್ರೀಂಕೋರ್ಟ್

padmanabha-wealth-ashtamangala-supreme-court
ತಿರುವನಂತಪುರ, ಆಗಸ್ಟ್ 14: ಅನಂತ ಸಂಪತ್ತು ಪ್ರಶ್ನೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿದೆ. ದೇಗುಲದ ನೆಲಮಾಳಿಗೆಯಲ್ಲಿನ ಅನಂತ ಸಂಪತ್ತಿನ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವುದೇ? ಎಂಬ ಪ್ರಶ್ನೆ ಕಾಡುತ್ತಿದೆ. ಅಷ್ಟಮಂಗಲ ಪ್ರಶ್ನೆ ಪ್ರಕಾರ ಸಂಪತ್ತು ಶೋಧದಿಂದ ದೇವರು ಮುನಿದಿದ್ದಾರೆ ಹಾಗೂ ಬಿ ಉಗ್ರಾಣನ್ನು ತೆರೆದರೆ ಭಾರೀ ಅವಘಡಗಳು ಸಂಭವಿಸಲಿವೆ.

ಆದರೆ ಈ ಎಚ್ಚರಿಕೆಯನ್ನು ನ್ಯಾಯಾಲಯ ಪರಿಗಣಿಸೀತೆ? ಪರಿಗಣಿಸಿದರೆ ನ್ಯಾಯಾಂಗಕ್ಕಿಂತ ಅಷ್ಟಮಂಗಲ ಪ್ರಶ್ನೆಯೇ ಮಿಗಿಲು ಎಂದಾಗುತ್ತದೆ. ಪರಿಗಣಿಸದೆ ಬಿ ಉಗ್ರಾಣವನ್ನು ತೆರೆಯಲು ಮುಂದಾದರೆ ದೇವರನ್ನು ಧಿಕ್ಕರಿಸಿ ಹೋದಂತಾಗುತ್ತದೆ. ಸೋ, ಹೇಗೆ ನೋಡಿದರೂ ನ್ಯಾಯಾಂಗದ ಪಾಲಿಗೆ ಇದು ಧರ್ಮ ಸಂಕಟದ ವಿಚಾರವಾಗಿ ಪರಿಣಮಿಸಲಿದೆ.

ಮೂರು ದಿನಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನೆಲಮಾಳಿಗೆಯಲ್ಲಿರುವ ಸಂಪತ್ತು ಶೋಧಿಸಿರುವುದರಿಂದ ಅನಂತ ಪದ್ಮನಾಭ ಮುನಿದಿದ್ದಾನೆ. ಅಂತೆಯೇ ಅತ್ಯಂತ ಮುಖ್ಯವಾಗಿರುವ ಬಿ ಉಗ್ರಾಣವನ್ನು ತೆರೆದರೆ ಅದನ್ನು ತೆರೆದವರ ವಂಶ ನಾಶವಾಗುತ್ತದೆ ಹಾಗೂ ಇನ್ನಿತರ ಅವಘಡಗಳು ಸಂಭವಿಸುತ್ತವೆ. ಸಂಪತ್ತಿನ ಫೊಟೊ ತೆಗೆಯುವುದು ಮತ್ತು ವಿಡಿಯೋ ಶೂಟಿಂಗ್‌ ಮಾಡುವುದು ಕೂಡ ದೇವ ಸಮ್ಮತವಲ್ಲ ಎಂದು ಕಂಡು ಬಂದಿದೆ.

ಬಿ ಉಗ್ರಾಣದಲ್ಲಿ ಅನಂತ ಪದ್ಮನಾಭನ ಇನ್ನೊಂದು ಬೃಹತ್‌ ವಿಗ್ರಹವಿದೆ. ಅನಾದಿ ಕಾಲದಿಂದ ಈ ವಿಗ್ರಹವನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಸಾಕ್ಷಾತ್‌ ನರಸಿಂಹಸ್ವಾಮಿಯೇ ಈ ಉಗ್ರಾಣವನ್ನು ಕಾವಲು ಕಾಯುತ್ತಿದ್ದಾನೆ. ಅಲ್ಲದೆ ಭಯಂಕರ ಸರ್ಪಗಳ ಕಾವಲು ಈ ಉಗ್ರಾಣಕ್ಕಿದೆ. ದೇಗುಲದ ಚೈತನ್ಯವಿರುವುದು ಕೂಡ ಈ ಉಗ್ರಾಣದಲ್ಲಿ. ಜತೆಗೆ ಈಗ ಸಿಕ್ಕಿರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚು ಸಂಪತ್ತು ಬಿ ಉಗ್ರಾಣದಲ್ಲಿದೆ. ಆದರೆ ಇದನ್ನು ಯಾವ ಕಾರಣಕ್ಕೂ ತೆರೆದು ನೋಡಬಾರದು. ಹಾಗೇನಾದರೂ ತೆರೆದರೆ ನಾನಾ ರೀತಿಯ ಕೆಡುಕುಗಳು ತಲೆದೋರಲಿವೆ ಹಾಗೂ ಕ್ಷೇತ್ರಕ್ಕೂ ಧಕ್ಕೆಯಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಟ್ಟಿರುವ ದೈವಜ್ಞರು ಎಚ್ಚರಿಸಿದ್ದಾರೆ.