ಬೆಂಗಳೂರು, ಆಗಸ್ಟ್ 14 : ದೇಶ ವಾಸಿಗಳನ್ನೆಲ್ಲ ಏಕರೂಪದಲ್ಲಿ ಗುರುತಿಸುವ ಸಲುವಾಗಿ ಕೇಂದ್ರ ಸರಕಾರ ಕೊಡಮಾಡುತ್ತಿರುವ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ಜನ ಎದ್ನೋ ಬಿದ್ನೋ ಎಂದು ಐಡಿ ಕಾರ್ಡ್ ವಿತರಿಸುವ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಇವತ್ತೇ ಇದನ್ನು ತೆಗೆದುಕೊಂಡರೆ ನಾಳೆನೇ ಅಷ್ಟೈಶ್ವರ್ಯ ಕುಲಾಯಿಸುತ್ತದೆ ಎಂದೇನೂ ಇಲ್ಲ.
ಸೋ, ಮ್ಯಾಡ್ ರಶ್ ಬೇಡ. ಸುಮ್ಮನೆ ಯುಐಡಿ ಕಾರ್ಡ್ ವಿತರಣೆ ಕೇಂದ್ರಗಳಿಗೆ ಹೋಗಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಏಕೆಂದರೆ ಈಗಿನ ರಷ್ ನೋಡಿದರೆ ಈ ಕಾರ್ಡ್ ಪಡೆಯುವುದು ಆಲ್ ಮೋಸ್ಟ್ ಒಂದು ದಿನದ ಪ್ರೋಗ್ರಾಂ ಆಗುತ್ತದೆ. ಆದ್ದರಿಂದ ಪುರುಸೊತ್ತಿದ್ದರೆ ಮಾತ್ರ ಅತ್ತ ಹೆಜ್ಜೆ ಹಾಕಿ. ಅಷ್ಟಕ್ಕೂ ಇವತ್ತಲ್ಲದಿದ್ದರೆ ನಾಳೆ ಪಡೆದರಾಯಿತು.
ಏಕೆಂದರೆ ಇದು ಕೇವಲ ಒಂದೆರಡು ವಾರದ ಯೋಜನೆ ಅಲ್ಲ. ಆದ್ದರಿಂದ ಇಂದೇ ಪಡೆಯೋಣ ಎಂಬ ಧಾವಂತ ಖಂಡಿತಾ ಬೇಡ. ಆಧಾರ್ ಕಾರ್ಡು ಪಡೆಯುವುದು ಒಳ್ಳೆಯದೇ. ಅದು ಕಡ್ಡಾಯವೂ ಆಗಲಿದೆ. ಆದರೆ ತಿಂಗಳು ಬಿಟ್ಟು ಪಡೆದರಾಯಿತು. urgent ಆಗಿರುವವರು ಹೋಗಿ ಕಾರ್ಡ್ ಪಡೆಯಲಿ. ನೀವು ನಿಧಾನಕ್ಕೆ ಹೋದರಾಯಿತು. ಏನಂತೀರಿ!?