ಪುಟಗಳು

ಚಿತ್ರದುರ್ಗದ ಕೋಟೆಯ ಬಾಗಿಲುಗಳು

        
ಚಿತ್ರದುರ್ಗದ ಏಳು ಸುತ್ತಿನ ಕೋಟೆಯೆಂದೊಡನೆ ಥಟ್ಟನೆ ನಮಗೆ ನೆನಪಿಗೆ ಬರುವುದು ಈ ಪ್ರಾಂತ್ಯವನ್ನು ಆಳಿದ ಪಾಳೆಯಗಾರರು. ಈ ದುರ್ಗಮ ಕೋಟೆಯನ್ನು ಪಾಳೆಯಗಾರಗಿಂತ ಮೊದಲು ಆಳ್ವಿಕೆ ನಡೆಸಿದವರು ಈ ಕೋಟೆಯ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಸುಮಾರು 10ನೇ ಶತಮಾನದಲ್ಲಿಯೇ ಕೋಟೆಯ ನಿರ್ಮಾಣವಾಗಿರಬಹುದು ಎಂಬುವುದು ಇತಿಹಾಸಕಾರರ ಅನಿಸಿಕೆ ಕ್ರಿ.ಶ.1070 ರಲ್ಲಿಯೇ ಕೋಟೆ ಇದುದ್ದಕ್ಕೆ ಆಧಾರವಿದೆ. ಏಳು ಸುತ್ತಿನಿಂದ ಕೂಡಿರುವ ಈ ಕೋಟೆಗೆ ಏಳು ಪ್ರಮುಖ ಬಾಗಿಲುಗಳಿವೆ.
ರಂಗಯ್ಯನ ಬಾಗಿಲು:
            ಪೂರ್ವ ದಿಕ್ಕಿಗಿರುವ ಈ ಮಹಾದ್ವಾರವು ಪಾಳೆಯಗಾರರ ಮನೆದೇವರಾದ ನೀರ್ಥಡಿ ರಂಗನಾಥನ ಹೆಸರಿನಲ್ಲಿ “ರಂಗಯ್ಯನ ಬಾಗಿಲು” ಎಂದು ಹೆಸರಾಗಿದೆ. ಇದು ಹೊರಸುತ್ತಿನ ಕೋಟೆಯ ಭಾಗವಾಗಿದ್ದು, ಇಡೀ ಊರನ್ನೇ ಸುತ್ತಿ 12 ಕಿ.ಮೀ. ಉದ್ದವಾಗಿದ್ದು, ಬೆಟ್ಟದ ಹಿಂಭಾಗವೆಂದರೆ ಆವರಿಸಿದೆ. ಈಗ ಇಲ್ಲಿ ಸರ್ಕಾರದ ಪ್ರಾಚ್ಯವಸ್ತು ಸಂಗ್ರಹಲಾಯವೂ ಇದೆ.
ಸಿದ್ದಯ್ಯನ ಬಾಗಿಲು:
            ಇದಕ್ಕೆ ‘ಸಂತೆಬಾಗಿಲು’ ಎಂತಲೂ ಕರೆಯುತ್ತಾರೆ. ಗಾಂಧಿ ಸರ್ಕಲ್ ನಲ್ಲಿ [ಮಾರ್ಕೆಟ್ ಮುಂಭಾಗ] ನಿಂತು ನೋಡಿದರೆ, ಈ ಬಾಗಿಲು ಕಾಣುತ್ತದೆ. ಪಾಳೆಯಗಾರರ ಕಾಲದಲ್ಲಿ ಈ ಬಾಗಿಲು ಅಂಕಣದಲ್ಲಿ ಕುಸ್ತಿಕಾಳಗ, ಹುಲಿ ಕಾಳಗ, ಮುಂತಾದವುಗಳು ನಡೆಯುತ್ತಿದ್ದು, ಪಾಳೆಯಗಾರರು ಪುರಪ್ರಮುಖರು ಇಲ್ಲಿಯ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಒಂದು ಭಾಗದ ದ್ವಾರವನ್ನು ಮುಚ್ಚಿ, ಲಕ್ಷ್ಮಿನಾರಾಯಣಸ್ವಾಮಿ ಗುಡಿಯನ್ನಾಗಿಸಿದ್ದಾರೆ. 
ಉಚ್ಚಂಗಿ ಬಾಗಿಲು :
            ಪಾಳೆಯಗಾರರ ಮನೆದೇವತೆ ಉಚ್ಚಂಗಮ್ಮ ಈ ದೇವತೆಯ  ಹೆಸರಿನಲ್ಲೇ ಕೋಟೆಯ ಪಶ್ಚಿಮ ದಿಕ್ಕಿನ ಬಾಗಿಲಿಗೆ ಉಚ್ಚಂಗಿ ಬಾಗಿಲು ಎನ್ನುತ್ತಾರೆ. ಈ ದ್ವಾರದ ಮೂಲಕ ಸಿಹಿನೀರು ಹೊಂಡಕ್ಕೆ ಹೋಗಬಹುದು. ಈ ಬಾಗಿಲ ಬಳಿ ನರಸಿಂಹ, ಆಂಜನೇಯನ ದೇವಾಲಯಗಳಿವೆ. ಒಂದು ವೃಂದಾವನವು ಇದೆ. ಹಿಂದೆ ಈ ಹೊಂಡದಲ್ಲಿ ದೇವಿಯ ತೆಪ್ಪೋತ್ಸವ ನಡೆಯುತ್ತಿದ್ದಿತಂತೆ. ಈ ಹೊಂಡದ ನೀರನ್ನೇ ದೇವಿಯ ಅಭಿಷೇಕ್ಕೆ ಉಪಯೋಗಿಸುತಿದ್ದರಂತೆ.
ಜೋಡು ಬತೇರಿ ಬಾಗಿಲು:
            ಇದಕ್ಕೆ ಇನ್ನೊಂದು ಹೆಸರು ಲಾಲ್ ಗಡದ ಬತೇರಿ ಬಾಗಿಲು. ಲಾಲ್ ಗಡ್ ಎಂದು ಹೇಳಲು ಈ ಭಾಗದ ಕೋಟೆಗೆ ಕೆಂಪುವರ್ಣದ ಕಲ್ಲನ್ನು ಉಪಯೋಗಿಸಿರುವುದು. ಪಾಳೆಯಗಾರರ ದೇವರಾದ ಅಹೋಬಲ ನರಸಿಂಹನ ಹೆಸರಿನಿಂದಲೂ ಕರೆಯುತ್ತಾರೆ. 
ಹನುಮನ ಬಾಗಿಲು:
            ಪಾಳೆಗಾರರ ಆರಾಧ್ಯ ದೈವ ಹನುಮ. ಅವರ ಧ್ವಜವೂ ಸಹ ಹನುಮದ್ಗರುಡ ಲಾಂಛನ ಉಳ್ಳದ್ದು. ಈ ಕೋಟೆಯ ಪಶ್ಚಿಮದಲ್ಲಿ ಹನುಮಂತ ದೇವಾಲವಿದೆ. ಆದ್ದರಿಂದ ಹನುಮನ ಬಾಗಿಲೆಂತಲೂ ಕರೆಯುತ್ತಾರೆ. 
ಗಾರೆ ಬಾಗಿಲು:
            ಉಚ್ಚಂಗಮ್ಮನ ಗುಡಿಯಿಂದ ಬೆಟ್ಟದ ದಕ್ಷಿಣ ಭಾಗದಲ್ಲಿರುದೇ ಗಾರೆ ಬಾಗಿಲು ಕೋಟೆಯ ಏಳನೇ ಸುತ್ತು ಇಲ್ಲಿಂದಲೇ ಆರಂಭವಾಗುತ್ತದೆ. ನಯವಾದ ಗಾರೆಗಚ್ಚಿನಿಂದ ಕಟ್ಟಿರುವುದರಿಂದ ಗಾರೆಬಾಗಿಲು ಎನ್ನುತ್ತಾರೆ. 
ಕಾಮನ ಬಾಗಿಲು:
            ಬೆಟ್ಟಕ್ಕೇರಲು ಹಾಗೂ ಕೋಟೆಯ ಮುಖ್ಯದ್ವಾರಕ್ಕೆ ಮತ್ತು ಮೂರನೇ ಸುತ್ತಿನ ಕೋಟೆ ಪ್ರವೇಶಿಸುವ ಬಾಗಿಲೇ ಕಾಮನ ಬಾಗಿಲು. ಇಡೀ ಚಿತ್ರದುರ್ಗದ ಕೋಟೆಯ ಮಹಾದ್ವಾರಗಳಲ್ಲೇ ಅತ್ಯಂತ್ಯ ಪ್ರಮುಖ, ಸುಂದರ, ಸುಭದ್ರ, ಕಲಾತ್ಮಕ ಬಾಗಿಲು. 25 ಅಡಿ ಎತ್ತರದ ಈ ಭಾರಿ ಗೋಡೆಗಳ ಹೊರಭಾಗದಲ್ಲಿ ಆದಿಶೇಷ, ಶಿವಲಿಂಗ, ವಿಘ್ನೇಶ್ವರ, ಬಸವ, ಹಂಸ, ಕಮಲ, ಗಂಡಭೇರುಂಡ ಮುಂತಾದ ಸುಂದರ ಶಿಲ್ಪಗಳಿವೆ. ಬಾಗಿಲ ಬಳಿ ಸುಮಾರ 10 ಅಡಿ ಎತ್ತರದ ಕಲ್ಲಿನ ತೊಟ್ಟಿ ಇದೆ. ಈ ತೊಟ್ಟಿಯಲ್ಲಿ ಆನೆಗಳು ನೀರು ಕುಡಿಯುತ್ತಿದ್ದವಂತೆ. ಈ ಬಾಗಿಲ ಪಕ್ಕದಲ್ಲೇ ಒಂದು ಚೌಕಾಕಾರದ ಸುಂದರ ಹೊಂಡವಿದೆ. ಕಾಮನಬಾಗಿಲ ಬಳಿ ಇರುವುದರಿಂದ ಇದಕ್ಕೆ ‘ಕಾಮನಬಾವಿ’ ಎನ್ನುತ್ತಾರೆ.   

ಕೋಟೆಯೊಳಗಿನ ಸುತ್ತುಗಳು
ಹೊರಸುತ್ತಿನ ಕೋಟೆ:
ರಂಗಯ್ಯನ ಬಾಗಿಲು, ಲಾಲ್ ಕೋಟೆ ಬಾಗಿಲು, ಉಚ್ಚಂಗಿ ಬಾಗಿಲು, ಸಂತೆ ಬಾಗಿಲನ್ನು ಒಳಗೊಂಡಿದೆ.
ಗಾರೆ ಬಾಗಿಲು ಸುತ್ತು ಕೋಟೆ:
ಎರಡನೇ ಸುತ್ತು ಕೋಟೆಯ ಆವರಣ ಆವರಿಸಿದೆ.  
 ಕಾಮನ ಬಾಗಿಲು ಸುತ್ತು ಕೋಟೆ:
ಕೋಟೆಯ ಮೂರನೇ ಸುತ್ತನ್ನು ಒಳಗೊಂಡಿದೆ.  
 ಜಾಗಟೆ ಬಾಗಿಲು ಸುತ್ತು ಕೋಟೆ:
ಈ ನಾಲ್ಕನೇ ಸುತ್ತಿನ ಕೋಟೆಯ ಬಾಗಿಲಿಗೆ ವಿಷದ ಕತ್ತಿ ಬಾಗಿಲು ಎನ್ನುತ್ತಾರೆ.  
 ಗಂಟೆ ಬಾಗಿಲು ಸುತ್ತು ಕೋಟೆ:
ಐದನೇ ಸುತ್ತಿನ ಕೋಟೆಯ ಆವರಣ ಹೊಂದಿರುವ ಬಾಗಿಲಿಗೆ ಗಂಟೆ ಬಾಗಿಲು ಎನ್ನುತ್ತಾರೆ.  
ಟೀಕಿನ ಬಾಗಿಲು :
ಈ ಭಾಗದ ಕೋಟೆಯ ಬಾಗಿಲಿಗೆ ಕಸ್ತೂರಿ ರಂಗಪ್ಪನಾಯಕರ ಬಾಗಿಲು, ಟೀಕಿನ ಬಾಗಿಲು ಎಂದು ಕರೆಯುತ್ತಾರೆ.
 ಏಕನಾಥೇಶ್ವರಿ ಬಾಗಿಲು ಕೋಟೆ:
ಈ ಭಾಗದ ಕೋಟೆಯಲ್ಲಿ ಅರಮನೆ, ನಾಗರ, ತುಪ್ಪದ ಕೊಳ ಮುಂತಾದವುಗಳಿವೆ. ಏಕನಾಥೇಶ್ವರಿ ದೇವಾಲಯವಿದೆ. ಈ ಬಾಗಿಲಿಗೆ ಅಜ್ಜಿ ಬಾಗಿಲು ಎನ್ನುತ್ತಾರೆ.