ಪುಟಗಳು

ಚಂದ್ರವಳ್ಳಿ

       
ಚಿತ್ರದುರ್ಗದ ವಾಯುವ್ಯ ಬೆಟ್ಟದ ತಪ್ಪಲಿನ ಪ್ರದೇಶವೇ ಚಂದ್ರವಳ್ಳಿ. ಅಂಕಲಿಮಠದಿಂದ ಆಂಜನೇಯಗುಡಿವರೆಗೂ ಉತ್ತರ-ದಕ್ಷಿಣಾದಿಯೋಪಾದಿಯಲ್ಲಿ ಈ ಪ್ರದೇಶ ಹಬ್ಬಿದೆ. ಈ ಪ್ರದೇಶದಲ್ಲಿ ಉತ್ಖನನ, ಭೂಸಂಶೋಧನೆ ನಡೆಸಿದಾಗ ಈ ಪ್ರದೇಶದಲ್ಲಿ ದೊರೆತ ವಸ್ತುಗಳ ನಾಣ್ಯಗಳು, ಕಟ್ಟಡದ ಅವಶೇಷಗಳಿಂದ ಇಲ್ಲಿ ಚಂದ್ರವಳ್ಳಿ (ಚಂದನಾವತಿ) ಎಂಬ ದೊಡ್ಡ ನಗರವಿದ್ದುದಾಗಿಯೂ, ಪ್ರಾಚೀನ ಸಂಸ್ಕೃತಿಯ ತಾಣವಾಗಿದ್ದಿತೆಂದು, ಈ ಸಂಸ್ಕೃತಿ ಹರಪ್ಪ, ಮೆಹೊಂಜೋದಾರ ಸಂಸ್ಕೃತಿಗೆ ಸಮಾನವೆಂದು ಸಂಶೋಧಕರ ಅಭಿಪ್ರಾಯ.
        ಇಲ್ಲಿ ದೊರೆತ ಸಾವಿರಕ್ಕೂ ಮಿಗಿಲಾದ ವಸ್ತುಗಳಿಂದ ಕ್ರಿಸ್ತ ಪೂರ್ವದಲ್ಲಿಯೇ ಚಂದ್ರವಳ್ಳಿ ಪ್ರದೇಶವು ನಾಗರೀಕವಾಗಿದ್ದಿತೆಂದು ತಿಳಿದು ಬಂದಿದೆ. ಇಲ್ಲಿ ಕ್ರಿ.ಪೂ. 139ರಲ್ಲಿ ರ್ಹ್ಯಾ ಉಂಗಿಯ ಹಿತ್ತಾಳೆ ನಾಣ್ಯ, ರೋಮ್ ಚಕ್ರವರ್ತಿಯ ಅಗಸ್ಟಸ್ ನ ಬೆಳ್ಳಿಯ ನಾಣ್ಯ, ವೀರ ಬಲ್ಲಾಳನ ನಾಣ್ಯ ದೊರೆತಿವೆ. ಇಲ್ಲಿ ದೊರೆಕಿರುವ ಶಾತವಾಹನರ ನಾಣ್ಯಗಳ ಮೇಲೆ ಪುಲುಮಾಯಿ, ಮಹಾರಥಿ ಮುಂತಾದವರ ಹೆಸರುಗಳಿವೆ. ಹಲವಾರು ಆಧಾರಗಳಿಂದ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಕದಂಬರ ಮಯೂರವರ್ಮನ ಕಾಲದವರೆಗೂ ಈ ಪ್ರದೇಶದಲ್ಲಿ ಬೌದ್ಧ ಮತ ಪ್ರಚಾರದಲ್ಲಿತೆಂದು ತಿಳಿಯಬಹುದಾಗಿದೆ.
        ಇಲ್ಲಿಯ ಭೈರವೇಶ್ವರ ದೇವಾಲಯದ ಬಳಿಯ ಮಯೂರವರ್ಮನ ಶಾಸನದಿಂದ ಈ ಪ್ರದೇಶದಲ್ಲಿ ಆಗಲೇ ಇದ್ದ ತಟಾಕ(ಕೆರೆ)ಯನ್ನು ದುರಸ್ಥಿ ಮಾಡಿಸಿದನೆಂದು ತಿಳಿದು ಬರುತ್ತದೆ. ಈಗ ಅದೇ ಪ್ರದೇಶದಲ್ಲಿ ಸರ್ಕಾರವು ಸುಂದರವಾದ ಕೆರೆಯನ್ನು ಕಟ್ಟಿಸಿ ನೆನಪನ್ನು ಚಿರಸ್ಥಾಯಿಯಾಗಿಸಿದ್ದಾರೆ. ಇದೇ ಚಂದ್ರವಳ್ಳಿ ಪ್ರದೇಶದಲ್ಲಿ ಶ್ರೀ ಹುಲಿಗೊಂದಿ ಭೈರವೇಶ್ವರ ದೇವಾಲಯವು, ಚಂದ್ರವಳ್ಳಿ ಕೆರೆ, ಅಂಕಲಿಮಠ, ಪಂಚಲಿಂಗೇಶ್ವರ ಗುಹಾಂತರ ದೇವಾಲಯ, ಧವಳಪ್ಪನ ಗುಡ್ಡ, ಬಾಲಾಂಜನೇಯ ಪ್ರೇಕ್ಷಣೀಯ ಸ್ಥಳಗಳಾಗಿವೆ.
 ಪಂಚಲಿಂಗೇಶ್ವರ ದೇವಾಲಯ:
        ಹುಲಿಗೊಂದಿಯಲ್ಲಿರುವ ಪ್ರಸಿದ್ಧ ಅಂಕಲಿಮಠಕ್ಕೆ ಹೊಂದಿಕೊಂಡಂತೆ ಇರುವ ಬೃಹತ್ ಬಂಡೆಗಳ ಅಡಿಯಲ್ಲಿ ಪಾಂಡವರಿಂದ ಪ್ರತಿಷ್ಟಾಪಿಸಲ್ಪಟ್ಟಿವೆಯೆಂದು ಹೇಳಲಾಗುವ ಐದು ಲಿಂಗಗಳಿರುವ ದೇಗುಲವೇ ಈ ಪಂಚಲಿಂಗೇಶ್ವರ ದೇವಾಲಯ.