ಪುಟಗಳು

ಉಮಾ ಮಹೇಶ್ವರ ದೇವಾಲಯ

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ನಾಯಕನಹಟ್ಟಿ ಗ್ರಾಮದಿಂದ ಸುಮಾರು 7-8 ಕಿ.ಮೀ.  ದೂರದಲ್ಲಿರುವ ಎನ್.ಗೌರಿಪುರ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಸ್ಥಾಪಿತವಾಗಿರುವ ಹಾಗೂ ದಕ್ಷಿಣ ಭಾರತದಲ್ಲೇ ಇತಿಹಾಸದ ಹಿನ್ನೆಲೆಯನ್ನು ಹೊಂದಿರುವ ಏಕಶಿಲಾ ಗೌರಿಶಂಕರ ವಿಗ್ರಹವುಳ್ಳ ದೇವಾಲಯವು ಇಲ್ಲಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಶಿವನ ತೊಡೆಯ ಮೇಲೆ ಪಾರ್ವತಿದೇವಿ ಕುಳಿತಿರುವ ಹಾಗೂ ಒಂದೇ ಕಲ್ಲಿನಲ್ಲಿ ಕೆತ್ತಿರುವ ವಿಗ್ರಹವು ದಕ್ಷಿಣ ಭಾರತದಲ್ಲಿಯೇ ಎಲ್ಲಿಯೂ ಇಲ್ಲವೆಂಬುದು. ಈ ಗ್ರಾಮವು ಚಳ್ಳಕೆರೆಯಿಂದ ಸುಮಾರು 22 ಕಿ.ಮೀ. ಗೌರಿಯನ್ನು ತೊಡೆಯ ಮೇಲೆ ಕುಳ್ಳಿರಿಸಿದಂತಹ ಭಂಗಿ ನಿಜಕ್ಕೂ ನಯನ ಮನೋಹರ. ನಿಜಕ್ಕೂ ಅಪರೂಪ! ಹಾಗೂ ಅಮೋಘ!!
         ಈ ದೇಗುಲದ ಗರ್ಭಗುಡಿಯ ಮುಂದಿನ ನವರಂಗದ ಚಚ್ಚೌಕದ ಕಂಬಗಳು ತಮ್ಮ ಶಿಲ್ಪಕಲೆಯೊಂದಿಗೆ ಸೆಳೆಯುತ್ತವೆ. ಕಂಬಗಳಲ್ಲಿ ನರಸಿಂಹ, ಗಿಳಿ, ಬೇಡರಕಣ್ಣಪ್ಪ, ಭೈರಾಗಿ, ಇನ್ನು ಮುಂತಾದ ಆಕರ್ಷಕ ಕೃತಿಗಳನ್ನು ರಚಿಸಲಾಗಿದೆ. ಶಿವ-ಪಾರ್ವತಿಯರಿಗೆ ಎದುರಾಗಿ ನಂದಿ ವಿಗ್ರಹವೂ ಇದೆ. ಈ ದೇವಾಲಯವನ್ನು ನೋಡಲು ನಾಡಿನೆಲ್ಲೆಡೆಯಿಂದ ಶಿವಭಕ್ತರೂ ಬರುತ್ತಾರೆ. ಸಾಮಾನ್ಯವಾಗಿ ಶಿವನ ದೇವಾಲಯವೆಂದರೆ ಎಲ್ಲೆಡೆಯೂ ಲಿಂಗರೂಪದಲ್ಲಿಯೇ ಹೆಚ್ಚಾಗಿರುತ್ತದೆ. ಆದರೆ ಈ ದೇಗುಲದಲ್ಲಿ ಶಿವನು ಗೌರಿಸಮೇತನಾಗಿರುವುದು ಹಾಗೂ ಪುತ್ರರತ್ನರಾದ ಗಣೇಶ-ಸುಬ್ರಹ್ಮಣ್ಯರೊಂದಿಗೆ ಕುಟುಂಬ ಸಮೇತನಾಗಿರುವುದು ವಿಶೇಷ.