ಭಾರತದಲ್ಲಿ ಜನಾರೋಗ್ಯ ಸಾಧನೆ ದೇಶ ಸ್ವಾತಂತ್ರ್ಯ ಪಡೆದು ಆರು ದಶಕಗಳೇ ಕಳೆದರೂ ಸಾಧ್ಯವಾಗದಿರುವುದು ವಿಷಾದದ ಸಂಗತಿ. ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣ ಬಹಳ ಕಡಿಮೆ. ಬಡತನ, ಅನಕ್ಷರತೆ ಹೆಚ್ಚಾಗಿರುವ ಈ ದೇಶದಲ್ಲಿ ಸಹಜವಾಗಿಯೇ ರೋಗರುಜಿನಗಳು ಕೂಡ ಅಧಿಕ. ಔಷಧಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿರುವುದರಿಂದ ಮತ್ತು ಸರ್ಕಾರವೂ ಕೂಡ ಖಾಸಗೀಕರಣ ನೀತಿಗೆ ಪ್ರೋತ್ಸಾಹ ಕೊಡುತ್ತಿರುವುದರಿಂದ ರೋಗ ಚಿಕಿತ್ಸೆಗೆ ತಗಲುವ ವೆಚ್ಚಕ್ಕಿಂತ ರೋಗಪತ್ತೆಯ ವಿಧಾನಗಳಿಗೆ ಜನತೆ ಹಣ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರಿಗೆ ಮತ್ತು ಅನಕ್ಷರಸ್ಥರಿಗೆ ಆರೋಗ್ಯ ವ್ಯವಸ್ಥೆ ಕಡಿಮೆ ಖರ್ಚಿನಲ್ಲಿ ಕೈಗೆಟಕುತ್ತಿಲ್ಲ. ಆರೋಗ್ಯ ಎಂಬುದು ಅವರ ಪಾಲಿಗೆ ಮರೀಚಿಕೆಯಾಗಿದೆ. ಭಾರತೀಯ ವೈದ್ಯಪದ್ಧತಿಯ ಚಿಕಿತ್ಸಾ ವಿಧಾನಗಳನ್ನು ಯಾವ ಪ್ರಮಾಣದಲ್ಲಿ ಬಳಸಬಹುದಿತ್ತೋ ಅಷ್ಟರಮಟ್ಟಿಗೆ ಬಳಕೆಯಾಗದಿರುವುದು ಬೇಸರದ ಸಂಗತಿ.
ಜನಾರೋಗ್ಯ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮತ್ತು ಔಷಧಿ ಕ್ರಿಯಾ ಸಮಿತಿಯಲ್ಲಿ ಸಕ್ರಿಯರಾಗಿರುವ ಡಾ. ಪ್ರಕಾಶ್ ಸಿ. ರಾವ್ ರವರು ರಚಿಸಿರುವ `ಜನಾರೋಗ್ಯದ ಸವಾಲುಗಳು’ ಪುಸ್ತಕ ವೈದ್ಯರ ಕಣ್ಣು ಹಾಗೂ ಮನಸ್ಸನ್ನು ತೆರೆಸುವಂತಿದೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಲೇಖಕರ ಜನಪರ ಕಾಳಜಿ ವ್ಯಕ್ತವಾಗುತ್ತದೆ. ವೈದ್ಯ ವೃತ್ತಿ ವ್ಯಾಪಾರೀಕರಣಗೊಂಡಿರುವ ಇಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಮತ್ತು ಔಷಧಿಗಳ ಜಗತ್ತಿನ ಹಲವು ಆಯಾಮಗಳ ಕುರಿತು ಈ ಪುಸ್ತಕ ಓದುಗರೆದುರು ಅನೇಕ ವಿಷಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ವೃತ್ತಿಯಲ್ಲಿ ನಿರತರಾದ ಪ್ರತಿಯೊಂದು ವೈದ್ಯರೂ ಓದಲೇಬೇಕಾದಂತಹ ಕೃತಿಯಿದು. ಕೇವಲ ಓದುವುದು ಮಾತ್ರವಲ್ಲ ವೃತ್ತಿ ಬದುಕಿನಲ್ಲೂ ಅಳವಡಿಸಿಕೊಂಡಲ್ಲಿ ಡಾ. ಪ್ರಕಾಶ್ ರಾವ್ ರವರ ಶ್ರಮ, ಪ್ರಯತ್ನ ಸಫಲತೆ ಪಡೆಯುತ್ತದೆ. ವೈದ್ಯರು ಮಾತ್ರವಲ್ಲ ಜನಸಾಮಾನ್ಯರ ಈ ವಿಷಯಗಳನ್ನು ಅರಿತುಕೊಂಡಲ್ಲಿ ಒಳಿತು. ಸರ್ಕಾರದ ನೀತಿಗಳನ್ನು ರೂಪಿಸುವವರು, ಮಂತ್ರಿಗಳು, ಅಧಿಕಾರ ವರ್ಗದವರೂ ಈ ಪುಸ್ತಕ ಓದಿದಲ್ಲಿ ನೀತಿ ನಿಯಮಾವಳಿ ರೂಪಿಸುವಾಗ ಬದಲಾವಣೆ ತರಲು ಸಾಧ್ಯವಾಗಬಹುದು.
`ಜನಾರೋಗ್ಯದ ಸವಾಲುಗಳು’ ಪುಸ್ತಕದಲ್ಲಿ ಲೇಖಕರು ತಿಳಿಸಿರುವ ಕೆಮ್ಮಿನ ಔಷಧಿಗಳು, ಸಂಮಿಶ್ರ ಔಷಧಿಗಳ ಕುರಿತ ವಿಚಾರ ಓದುಗರನ್ನು ಬೆಚ್ಚಿಬೀಳಿಸುತ್ತದೆ. ಜನಪರವಾದ ಔಷಧಿ ನೀತಿ ಜಾರಿಗೊಳಿಸುವಲ್ಲಿ ಸರ್ಕಾರ ಕುರುಡು ಮತ್ತು ಕಿವುಡಾಗುವುದು ದುಃಖಕರ ಸಂಗತಿ. ಲಸಿಕಾ ಕಾರ್ಯಕ್ರಮ ಜಾರಿಗೊಳಿಸುವಾಗ ನಿಗದಿತ ನಿಯಮಗಳನ್ನು ಅನುಸರಿಸದೇ ಜನರ ಜೀವದೊಡನೆ ಆಟವಾಡುವ ವ್ಯವಸ್ಥೆ ಮುಂದುವರೆಯುತ್ತಿರುವುದು ನಿಜಕ್ಕೂ ಅಪಾಯಕಾರಿ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಮಾತೃಮರಣ ಮತ್ತು ಶಿಶುಮರಣಗಳನ್ನು ತಡೆಗಟ್ಟಬಹುದಾಗಿದೆ. ಇಡೀ ದೇಶದ ಜನರಿಗೆ ಶುದ್ಧವಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶೌಚಾಲಯ ನಿರ್ಮಾಣ ಸಾಧ್ಯವಾದಲ್ಲಿ ಜನಾರೋಗ್ಯ ಕಷ್ಟವೆನಿಸಲಾರದು.
- ಡಾ. ವಸುಂಧರ ಭೂಪತಿ (ಅಧ್ಯಕ್ಷರು, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು)- ಪುಸ್ತಕದ ಮುನ್ನುಡಿಯಿಂದ
ಶೀರ್ಷಿಕೆ: ಜನಾರೋಗ್ಯದ ಸವಾಲುಗಳು ಲೇಖಕರು:ಡಾ. ಪ್ರಕಾಶ್ ಸಿ ರಾವ್, ಪ್ರಕಾಶಕರು: ಚಿಂತನ ಪುಸ್ತಕ ಪುಟ:124 ಬೆಲೆ:ರೂ.60/-