ಪುಟಗಳು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟ

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನೀಡುವ 2009-2010, 2010-2011ನೇ ಸಾಲಿನ ಅನುವಾದ ಪ್ರಶಸ್ತಿ ಮತ್ತು 2008, 2009ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟವಾಗಿವೆ.
2009-2010ನೇ ಸಾಲಿನಲ್ಲಿ ಡಾ. ಸಿ.ಪಿ. ಕೃಷ್ಣಕುಮಾರ್, ಡಾ. ಕೆ.ಎಲ್. ಗೋಪಾಲಕೃಷ್ಣ ರಾವ್, ಡಾ. ಉಮಾ ವಿರೂಪಾಕ್ಷ ಕುಲಕರ್ಣಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಮತ್ತು ಪ್ರೊ.ಕೆ.ಎಸ್. ಭಗವಾನ್ ಅವರು ಅನುವಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2010-2011ನೇ ಸಾಲಿನಲ್ಲಿ ಅನುವಾದ ಪ್ರಶಸ್ತಿಗೆ ಡಾ. ಸದಾನಂದ ಕನವಳ್ಳಿ, ಡಾ.ಜಿ. ರಾಮಕೃಷ್ಣ, ಜಿ.ಎನ್. ರಂಗನಾಥ ರಾವ್, ಎನ್.ಎಸ್. ಸಂಗೊಳ್ಳಿ ಮತ್ತು ಪ್ರೊ. ಪಾರ್ವತಿ ಜಿ. ಐತಾಳ್ ಭಾಜನರಾಗಿದ್ದಾರೆ. ಪ್ರಶಸ್ತಿ ರೂ 25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅವರು, ‘ವಿದ್ವಾಂಸರ ಒಟ್ಟಾರೆ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಇದೇ ತಿಂಗಳ ಕೊನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ತಿಳಿಸಿದರು.
ಪುಸ್ತಕ ಬಹುಮಾನ: 2008ನೇ ಸಾಲಿನಲ್ಲಿ ಕೆ.ಪಿ. ಸುರೇಶ್ (ಪುಸ್ತಕ- ಕೊಸಿಮೊ), ದಿವಂಗತ ಡಾ. ಎ. ಜಾನಕಿ (ಗೋದಾನ), ರವಿ ಬೆಳಗೆರೆ (ಚಲಂ), ಮಹಮ್ಮದ್ ಕುಳಾಯಿ (ಮಿತ್ತಬೈಲ್ ಯಮುನಕ್ಕ) ಮತ್ತು ಚಂದ್ರಕಾಂತ ಪೋಕಳೆ (ಭಂಡಾರ ಭೋಗ) ಅವರಿಗೆ ಉತ್ತಮ ಅನುವಾದಕ್ಕೆ ಪುಸ್ತಕ ಬಹುಮಾನ ಪ್ರಶಸ್ತಿ ದೊರೆತಿದೆ ಎಂದರು.
2009ನೇ ಸಾಲಿನಲ್ಲಿ ಮಾಧವ ಚಿಪ್ಪಳಿ (ಆರು ಟಾಲ್‌ಸ್ಟಾಯ್ ಕಥೆಗಳು ಪುಸ್ತಕ), ಡಾ.ಜೆ.ಎಸ್. ಕುಸುಮಗೀತಾ (ಅಂತಿಮ ಜ್ವಾಲೆ), ಡಾ.ಚಿದಾನಂದ ಸಾಲಿ (ಯಜ್ಞ – ಒಂಭತ್ತು ಕಥೆಗಳು), ಕೆ.ಕೆ. ಗಂಗಾಧರನ್ (ಬಳಲಿದ ಬಾಳಿಗೆ ಬೆಳಕು) ಮತ್ತು ಸುಮಿತ್ರಾ ಹಲವಾಯಿ (ಕನಸೆಂಬ ಊರುಗೋಲು) ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ ತಲಾ ರೂ 10 ಸಾವಿರ ನಗದು, ಫಲಕ ಒಳಗೊಂಡಿದೆ.