ಪುಟಗಳು

ಪೆಟ್ರೋಲ್‌ ಬೆಲೆ ಮತ್ತೆ 1.35 ರು. ಏರಿಕೆ

ಹೊಸದಿಲ್ಲಿ, ಜೂನ್ 1: ಬುಧವಾರ ಮಧ್ಯ ರಾತ್ರಿಯಿಂದಲೇ ಪೆಟ್ರೋಲ್‌ ಬೆಲೆ ಲೀಟರ್ ಗೆ 1.35 ರುಪಾಯಿ ಏರಿಕೆಯಾಗುವುದೆಂದು ಸರಕಾರಿ ಒಡೆತನದ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ತಿಳಿಸಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 73 ರುಪಾಯಿ ಆಗಿದೆ.

ಕಳೆದ ಮೇ 15ರಂದು ಪೆಟ್ರೋಲ್‌ ಬೆಲೆಯಲ್ಲಿ 5 ರೂ. ಏರಿಕೆ ಮಾಡಿದ್ದು, ಅದು ಕಚ್ಚಾ ತೈಲ ಮತ್ತದರ ಸಂಸ್ಕರಣೆ ವೆಚ್ಚವನ್ನು ಭರಿಸುವಷ್ಟು ಸಾಕಾಗುವುದಿಲ್ಲವೆಂದು ಐಒಸಿ ಅಧ್ಯಕ್ಷ ಆರ್‌.ಎಸ್‌. ಬುಟೋಲಾ ಹೇಳಿದ್ದಾರೆ. ಮೇ 14 ರಂದು ಪೆಟ್ರೋಲ್ ಬೆಲೆ ಲೀಟರ್ ಗೆ 5 ರುಪಾಯಿ ಹೆಚ್ಚಿಸಲಾಗಿತ್ತು.

ಏರಿಕೆ ಬಳಿಕವೂ ಲೀಟರಿಗೆ 4.58 ರೂ. ನಷ್ಟವಾಗುತ್ತಿದೆ. ಪೆಟ್ರೋಲ್‌ ಅನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡಿದರೆ ಸರಕಾರ ಕಂಪನಿಗೆ ನಷ್ಟವನ್ನು ಭರ್ತಿ ಮಾಡಿಕೊಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ಇದೇ ರೀತಿ ಅಡುಗೆ ಅನಿಲ ಮಾರಾಟದಿಂದ ಐಒಸಿಗೆ ಸಿಲಿಂಡರ್ ಗೆ 380.57 ರು. ಮತ್ತು ಪಡಿತರ ಸೀಮೆಎಣ್ಣೆಯಲ್ಲಿ ಲೀಟರಿಗೆ 25.85 ರು. ನಷ್ಟ ಉಂಟಾಗುತ್ತಿದೆ ಎಂದವರು ಹೇಳಿದ್ದಾರೆ.