ನವದೆಹಲಿ, ಜೂ. 1 : ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರುವ 85 ಲಕ್ಷಕ್ಕೂ ಹೆಚ್ಚಿನ ಆದಾಯ ತೆರಿಗೆದಾರರು ಇನ್ನು ಮುಂದೆ ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಅಧಿಕೃತವಾಗಿ ಹೇಳಿದೆ. ಈ ಅಂಶವನ್ನು ಕಳೆದ ಕೇಂದ್ರ ಬಜೆಟ್ ನಲ್ಲಿ ಕೂಡ ಪ್ರಸ್ತಾಪಿಸಲಾಗಿತ್ತು.
"ವಾರ್ಷಿಕ 5 ಲಕ್ಷ ರು.ಗಿಂತ ಕಡಿಮೆ ಆದಾಯವಿರುವ ತೆರಿಗೆದಾರರು ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ. ಜೂನ್ ಮೊದಲ ವಾರದಲ್ಲಿ ಈ ಕುರಿತಂತೆ ಅಧಿಕೃತ ಸುತ್ತೋಲೆ ಕಳುಹಿಸಲಾಗುವುದು" ಎಂದು ನಿವೃತ್ತರಾಗುತ್ತಿರುವ ನೇರ ತೆರಿಗೆ ಮಂಡಳಿಯ ಅಧ್ಯಕ್ಷರಾಗಿರುವ ಸುಧೀರ್ ಚಂದ್ರಾ ಅವರು ಹೇಳಿದ್ದಾರೆ.
ಇದು ಪ್ರಸ್ತುತ ಹಣಕಾಸು ವರ್ಷ 2011-12ರಿಂದ ಜಾರಿಗೆ ಬರಲಿದೆ. ಈ ಯೋಜನೆಯ ಫಲಾನುಭವಿ ಆದಾಯ ತೆರಿಗೆದಾರರು ಈ ಹಣಕಾಸು ವರ್ಷ ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ. ಆದರೆ, ಆದಾಯ ತೆರಿಗೆ ಮರುಪಾವತಿ ಆಗಬೇಕಾದ ಪಕ್ಷದಲ್ಲಿ ರಿಟರ್ನ್ ಫೈಲ್ ಮಾಡಬೇಕಾಗುತ್ತದೆ ಎಂದು ಚಂದ್ರಾ ಅವರು ಸ್ಪಷ್ಟಪಡಿಸಿದ್ದಾರೆ.
ಡಿವಿಡೆಂಡ್ ಮತ್ತಿತರ ಆದಾಯಮೂಲಗಳಿರುವ ಸಂಬಳದಾರ ಆದಾಯ ತೆರಿಗೆ ಮರುಪಾವತಿ ಸಲ್ಲಿಸಲು ಇಚ್ಛಿಸದಿದ್ದರೆ, ಅಂತಹ ಆದಾಯಮೂಲಗಳನ್ನು ನೌಕರದಾರರಿಗೆ ತೆರಿಗೆ ಕಡಿತ ಮಾಡಲು ತಿಳಿಸಬೇಕಾದ್ದು ಸಂಬಳದಾರರ ಕರ್ತವ್ಯ. ಫಾರ್ಮ್ 16 ನೀಡುವುದನ್ನೇ ಆದಾಯ ತೆರಿಗೆ ರಿಟರ್ನ್ ಎಂದು ಪರಿಭಾವಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.