ಪುಟಗಳು

ಎಂಡ್ಕುಡರಿಗೆ ಹಬ್ಬ, 3 ಸಾವಿರ ಬಾರ್ ಗೆ ರೇಣು ಜೈ


ಬೆಂಗಳೂರು, ಸೆ.7:ಯಾರೂ ಏನಾದರೂ ಅಂದುಕೊಳ್ಳಲಿ, ಬಾಟ್ಲಿ ಹೊಡೆಯುವುದು, ಲೈಸನ್ಸ್ ರದ್ದು, ಟೈಮಿಂಗ್ಸ್ ಚೇಂಜ್ ಮಾಡುವುದರಲ್ಲಿ ಸಚಿವ ರೇಣುಕಾಚಾರ್ಯ ಅವರನ್ನು ಮೀರಿಸಿದವರಿಲ್ಲ.

ಈಗ ಮಾನ್ಯ ಅಬಕಾರಿ ಸಚಿವರು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮೂರು ಸಾವಿರದಷ್ಟು ಹೊಸ ಬಾರ್‌ ಹಾಗೂ ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡುವ ಬಗ್ಗೆ
ಮುಖ್ಯಮಂತ್ರಿ ಸದಾನಂದ ಗೌಡರೊಂದಿಗೆ ಸಮಾಲೋಚನೆ ಮಾಡುವುದಾಗಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಹೊಸದಾಗಿ ಯಾವುದೇ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಲೈಸನ್ಸ್ ನೀಡಲ್ಲ ಎಂಬ ವಿಷಯವನ್ನು ಒತ್ತಿ ಒತ್ತಿ ಹೇಳಿದ ರೇಣುಕಾ, ಹೊಸ ಬಾರುಗಳ ಉದ್ಘಾಟನೆಗೆ ತಯಾರಿ ನಡೆಸಿದ್ದರಂತೆ.

ಹೊಸ ಬಾರ್ ಏಕೆ?: ಸಾರಾಯಿ ನಿಷೇಧ ಮಾಡಿದ್ದರಿಂದ ಬಾರ್‌ಗಳ ಬೇಡಿಕೆ, ಪ್ರಮಾಣ, ಹೆಚ್ಚಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಂದ ಮದ್ಯವನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ.

ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸಲು ಹೊಸ ಲೈಸನ್ಸ್ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ಮದ್ಯಸಾರ ವಿತರಣೆ: ಸುಮಾರು ಆರು ಕಂಪನಿಗಳಿಗೆ 13 ಲಕ್ಷ ಮದ್ಯಸಾರವನ್ನು ವಾರ್ಷಿಕವಾಗಿ ವಿತರಣೆ ಮಾಡಲು ಸಮ್ಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಂದ 27 ಕೋಟಿ ಲೀಟರ್ ಮದ್ಯಸಾರವನ್ನು ಉತ್ಪಾದನೆ ಮಾಡುತ್ತಿದ್ದು, ಇದರಲ್ಲಿ 19 ಕೋಟಿಗೂ ಹೆಚ್ಚು ಲೀಟರ್ ಮದ್ಯಸಾರವನ್ನು ಮದ್ಯ ಉತ್ಪಾದನೆಗೆ
ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪರ್ಯಾಯ ಇಂಧನ: ಕರ್ನಾಟಕದ ವಾಹನಗಳಿಗೆ ಸ್ಪಿರಿಟ್‌ನ್ನು ಪರ್ಯಾಯ ಇಂಧನವಾಗಿ ಬಳಸುವುದರ ಜೊತೆಗೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯ ಗಳಿಗೆ ಸ್ಪಿರಿಟ್‌ನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದರು.