ಯಾದಗಿರಿ, ಮಾ. 12 : ಈ ಗ್ರಾಮದಲ್ಲಿ ಇನ್ನು ಮುಂದೆ ಮದ್ಯ ಮಾರುವಂತಿಲ್ಲ, ಗ್ರಾಮದವರಾರೂ ಕುಡಿಯುವಂತಿಲ್ಲ. ಒಂದು ವೇಳೆ ಮದ್ಯ ಮಾರಿದರೆ ಸಾವಿರ ರು., ಕುಡಿದರೆ ಐನೂರು ರು. ದಂಡ. ದಂಡ ತೆರಲು ಸಿದ್ಧರಿರುವವರು ಮದ್ಯ ಮಾರಬಹುದು ಮತ್ತು ಕುಡಿಯಬಹುದು.
ಯಾದಗಿರಿ ಜಿಲ್ಲೆಯ ಶಹಾಪುರ್ ತಾಲ್ಲೂಕಿನ ಪುಟ್ಟ ಹಳ್ಳಿ ಹುಂಡೇಕಲ್‌ನಲ್ಲಿ ಇಂತಹ ದಿಟ್ಟ ನಿರ್ಣಯ ತೆಗೆದುಕೊಂಡಿರುವವರು ಸರಕಾರ ಅಧಿಕಾರಿಗಳಲ್ಲ, ಸ್ವತಃ ಗ್ರಾಮಸ್ಥರೇ ಇಂತಹ ಒಂದು ಗಟ್ಟಿ ನಿರ್ಣಯವನ್ನು ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿನ ಜನಸಂಖ್ಯೆ ಕೇವಲ ಎರಡು ಸಾವಿರವಿದ್ದೀತು, ಮತದಾರರು 1,400 ಮಂದಿ. ಇಷ್ಟಿದ್ದರೂ ಕುಡಿಯುವವರು ಕಮ್ಮಿಯಿರಲಿಲ್ಲ.
ಈ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತಿತ್ತು. ಬಡ ಕುಟುಂಬಗಳೇ ಅಧಿಕವಾಗಿರುವ ಇಲ್ಲಿ ಮನೆಯ ದೊಡ್ಡವರು, ಚಿಕ್ಕವರೆನ್ನದೇ ಎಲ್ಲರೂ ಮದ್ಯದ ದಾಸರೇ ಆಗಿದ್ದರು. ಮನೆಗಳಲ್ಲಿ ಜಗಳ ತಕರಾರು ಇಲ್ಲಿ ಸಾಮಾನ್ಯವಾಗಿತ್ತು. ಹಲವು ಕುಟುಂಬಗಳು ಬೀದಿ ಪಾಲಾಗಿ, ಯುವಕರು ಕುಡಿತದ ಚಟಕ್ಕೆ ದಾಸರಾಗಿ ಕುಟುಂಬಗಳ ನೆಮ್ಮದಿ ಕೆಡಿಸಿತ್ತು.
ಗ್ರಾಮದ ಪ್ರಜ್ಞಾವಂತ ನಾಗರಿಕರು ಯುವಕರನ್ನು ಈ ಚಟದಿಂದ ಬಿಡಿಸಲು ಹಾಗೂ ಅವರ ಬದುಕು ಸುಧಾರಿಸಲು ನಿರ್ಧರಿಸಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಸಭೆ ಸೇರಿದ್ದರು. ಕುಡಿತದ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಟ್ಟರು. ಎಲ್ಲರ ಮನವೊಲಿಸಿ, ಗ್ರಾಮದವರಾರೂ ಕುಡಿಯಬಾರದು, ಗ್ರಾಮದಲ್ಲಿ ಮದ್ಯ ಮಾರಾಟ ಮಾಡಬಾರದು ಎಂಬ ನಿರ್ಣಯ ಕೈಗೊಂಡೇ ಬಿಟ್ಟರು.
ಮಾರಿದರೆ 1,000 ರು. ಮತ್ತು ಕುಡಿದರೆ 500 ರು. ದಂಡ ಪಾವತಿಸಬೇಕೆಂದು ನಿರ್ಣಯ ಅಂಗೀಕರಿಸಲಾಯಿತು. ಕೆಲ ಯುವಕರೂ ಹಿರಿಯರ ಮಾತಿಗೆ ಬೆಲೆ ಕೊಟ್ಟು ಮದ್ಯ ಸೇವನೆ ಬಿಡುವುದಾಗಿ ಮಾತು ಕೊಟ್ಟಿದ್ದಾರೆ. ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆಯನ್ನು ಹಳ್ಳಿಯ ಹಿರಿಯರು ನಿಜ ಮಾಡಿ ತೋರಿಸಿದ್ದಾರೆ. ಭಲೇ ಗ್ರಾಮಸ್ಥರೆ.