ಪುಟಗಳು

ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ …


ಕನ್ನಡದ ಪ್ರಮುಖ ವೈದ್ಯ ಸಾಹಿತಿಗಳಲ್ಲೊಬ್ಬರಾದ ಡಾ.ಹೆಚ್.ಗಿರಿಜಮ್ಮನವರ `ಗರ್ಭಧಾರಣೆ:ಸಂದೇಹ ನಿವಾರಣೆಪುಸ್ತಕ ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೈಪಿಡಿ.

ಒಂದೆಡೆ ಜನಸಂಖ್ಯೆ ನಾಗಾಲೋಟದಲ್ಲಿ ಏರುತ್ತಲೇ ಇದ್ದರೆ, ಮತ್ತೊಂದೆಡೆ ಲೈಂಗಿಕ ವಿಷಯಗಳ ಕುರಿತ ಅಜ್ಞಾನವೂ ಹೆಚ್ಚುತ್ತಿದೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ಜನಸಾಮಾನ್ಯರಿಗೆ ದಾಂಪತ್ಯ-ಸಾಂಗತ್ಯದ ಕುರಿತು ಸುಲಭ ಭಾಷೆಯಲ್ಲಿ ಅರಿವು ನೀಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿರುವ ಗಿರಿಜಮ್ಮನವರ ಈ ಪುಸ್ತಕ ಗರ್ಭಧಾರಣೆ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ವಿಷಯಗಳನ್ನು ಚರ್ಚಿಸುತ್ತದೆ.

ಗಂಡು ಹೆಣ್ಣಿನ ಸಾಂಗತ್ಯ, ಗರ್ಭ ನಿರೋಧಕಗಳ ಬಳಕೆ, ಗರ್ಭಧಾರಣೆ, ಗರ್ಭಿಣಿ ಸ್ತ್ರೀಯರು ವಹಿಸಬೇಕಾದ ಎಚ್ಚರಿಕೆಗಳು, ಮೂಢನಂಬಿಕೆಗಳು, ಆಹಾರಕ್ರಮ, ಸ್ತನ್ಯಪಾನದ ಮಹತ್ವ, ಹೆರಿಗೆ, ಇತ್ಯಾದಿ ವಿಷಯಗಳ ಕುರಿತ ವಿವರಗಳಿವೆ. ಪ್ರಶ್ನೋತ್ತರಗಳ ಮಾದರಿಯ ನಿರೂಪಣೆ ವಿಷಯವನ್ನು ಓದುಗರಿಗೆ ಸುಲಭವಾಗಿ ಮುಟ್ಟಿಸುವಂತಿದೆ. ರೇಖಾಚಿತ್ರಗಳ ಬಳಕೆ ಪುಸ್ತಕದ ಸೊಗಸನ್ನು ಹೆಚ್ಚಿಸಿದೆ.

ಶೀರ್ಷಿಕೆ : ಗರ್ಭಧಾರಣೆ : ಸಂದೇಹ ನಿವಾರಣೆ ಲೇಖಕರು : ಡಾ. ಹೆಚ್. ಗಿರಿಜಮ್ಮ ಪ್ರಕಾಶಕರು : ವಸಂತ ಪ್ರಕಾಶನ ಪುಟಗಳು :115 ಬೆಲೆ:ರೂ.50/-

ಮಣ್ಣೆ ಕಾವಲು ಶ್ರೀ ಮಣ್ಣೆಮ್ಮ ದೇವಿ: ಶ್ರೀ ಮಣ್ಣೆಮ್ಮ ದೇವಿ ಜಾತ್ರಾ ಮಹೋತ್ಸವ (ದಿನಾಂಕ:೨೫.೦೪.೨೦...

ಮಣ್ಣೆ ಕಾವಲು ಶ್ರೀ ಮಣ್ಣೆಮ್ಮ ದೇವಿ: ಶ್ರೀ ಮಣ್ಣೆಮ್ಮ ದೇವಿ ಜಾತ್ರಾ ಮಹೋತ್ಸವ (ದಿನಾಂಕ:೨೫.೦೪.೨೦...

ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟ

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅದರ ಭಾಗವಾದ ಅಸ್ಪೃಶ್ಯತೆಯ ಪ್ರಶ್ನೆ ಮತ್ತೆ- ಮತ್ತೆ ಏಳುತ್ತಾ ಬಂದಿದೆ. ಇದರಲ್ಲಿ ಅಡಕವಾಗಿರುವ ಅಸಮಾನತೆ ಮತ್ತು ಶೋಷಣೆಯ ಅಂಶಗಳ ಮೇಲೆ ಚರ್ಚೆಗಳು, ಆಂದೋಲನಗಳು ನಡೆಯುತ್ತ ಬಂದಿವೆ. ಆಧುನಿಕ ಭಾರತದಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದ ಹೋರಾಟ ಇಂತವುಗಳಲ್ಲಿ ಪ್ರಮುಖವಾದದ್ದು. ಈ ಅವಿರತ ಹೋರಾಟಗಾರ ದಲಿತ ವಿಭಾಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದರು, ಮೇಲ್ಜಾತಿ ಆಪಾಢಭೂತಿತನಗಳನ್ನು ಬಯಲಿಗೆಳೆದರು, ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ, ನಂತರವೂ ಕಾಂಗ್ರೆಸ್ ಮತ್ತು ಅದರ ನೀತಿಗಳನ್ನು ಬಯಲಿಗೆಳೆದರು. ಆದರೆ ಅಂತಿಮವಾಗಿ ಹಿಂದೂ ಸಮಾಜದ ಅನ್ಯಾಯಗಳಿಂದ ತಪ್ಪಿಸಿಕೊಳ್ಳಲು ಬೌದ್ಧ ಧರ್ಮವನ್ನು ಅಂಗೀಕರಿಸಿ ಎಂದು ತಮ್ಮ ಅನುಯಾಯಿಗಳಿಗೆ ಹೇಳಿದರು. ಇದರಿಂದ ದಲಿತರ ಪರಿಸ್ಥಿತಿ ಬದಲಾಗಲಿಲ್ಲ. ಈಗಲೂ ಒಂದೆಡೆ ಅಂಬೇಡ್ಕರ್‌ರವರನ್ನು ಅಧಿಕೃತವಾಗಿ ಹಾಡಿ ಹೊಗಳಲಾಗುತ್ತಿದೆ, ಅವರ ಹೆಸರನ್ನು ಬಳಸಿಕೊಳ್ಳಲು ಆಳುವ ವರ್ಗಗಳ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ; ಇನ್ನೊಂದೆಡೆ ಸಮಾನತೆಯ ಟೊಳ್ಳು ಹೇಳಿಕೆಗಳು, ಮೀಸಲಾತಿ ಇತ್ಯಾದಿಗಳು ಕೇಳಬರುತ್ತಿವೆಯೇ ಹೊರತು ಬಹುಪಾಲು ದಲಿತರ ಬದುಕಿನ ಬವಣೆಗಳು ಕೊನೆಗಾಣುತ್ತಿಲ್ಲ. ಇದು ಸಮಾನತೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತರ ಮುಂದೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಇಂತಹ ಸನ್ನಿವೇಶದಲ್ಲಿ ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟದ ಒಂದು ವಸ್ತುನಿಷ್ಟ ಪರಾಮರ್ಶೆ ಇಂತಹ ಕಾರ್ಯಕರ್ತರಿಗೆ ಮುಂದಿನ ದಾರಿ ತೋರಬಲ್ಲದು. ಅವರ ಕರ್ಮಭೂಮಿಯಾದ ಮಹಾರಾಷ್ಟ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾರ್ಮಿಕ ಮುಂದಾಳು ಪ್ರಭಾಕರ ಸಂಝಗಿರಿಯವರು ಇಂತಹ ಒಂದು ಪರಾಮರ್ಶೆಯನ್ನು ಡಾ.ಅಂಬೇಡ್ಕರ್‌ರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮಾಡಿದ್ದರು. ಮುಂದೆ ಅದು ಪುಸ್ತಕರೂಪದಲ್ಲಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಯಿತು. ಅದರ ಅನುವಾದ ಈ ಪುಸ್ತಕ.
ಶೀರ್ಷಿಕೆ: ಡಾ. ಬಿ.ಆರ‍್.ಅಂಬೇಡ್ಕರ‍್ – ಜೀವನ ಮತ್ತು ಹೋರಾಟ ಲೇಖಕರು: ಪ್ರಭಾಕರ‍್ ಸಂಝಗಿರಿ ಅನುವಾದ:ಸಬಿತಾ ಶರ್ಮ ಪ್ರಕಾಶಕರು: ಕ್ರಿಯಾ ಪ್ರಕಾಶನ ಪುಟ: 48+4 ಬೆಲೆ:ರೂ.15/-

ದಿನದ ಜನ- ಇಂದು ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನ


ಇವತ್ತು ನಗೆ ಸಾಮ್ರಾಟ ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನ. ಕಾಮೆಡಿ ಎಂಬ ಪದಕ್ಕೆ ಅನ್ವರ್ಥ ಎಂಬಂತೆ ಇರುವ ಚಾರ್ಲಿಯ ಸಿನಿಮಾಗಳನ್ನು ಜನ ಇಂದಿಗೂ ಆಸ್ವಾದಿಸುತ್ತಾರೆ. ಆಗಿನ್ನೂ ಸಿನಿಮಾ ಜಗತ್ತು ಅಂಬೆ ಗಾಲಿಡುತ್ತಿದ್ದ ಕಾಲದಲ್ಲಿ ಆತ ನಟನಾಗಿ ಗಳಿಸಿದ ಜನಪ್ರಿಯತೆ ಇನ್ನೂ ಮಾಸಿಲ್ಲ.
ಕಪ್ಪು ಬಣ್ಣದ ಮಾಸಲು ಕೋಟು, ಸುತ್ತಳತೆಯ ಟೋಪಿ, ಮುಖದ ಮೇಲೆ ಚೋಟುದ್ದದ ಮೀಸೆ ಇರುವ , ಕೈಯಲ್ಲೊಂದು ವಾಕಿಂಗ್ ಸ್ಟಿಕ್ ಹಿಡಿದ...ಟ್ರಾಂಪ್ ಪಾತ್ರಧಾರಿ ಚಾಪ್ಲಿನ್ ಗುರುತು ತಿಳಿಸಲು ಇಷ್ಟು  ಹೇಳಿದರೆ ಸಾಕು. 
ಆಗಿನ್ನು ಮೂಕಿ ಚಿತ್ರಗಳ ನಿರ್ಮಾಣವಾಗುತ್ತಿದ್ದ  ದಿನಗಳಲ್ಲಿ  ತನ್ನ ಹಾವಭಾವಗಳ ಮೂಲಕವೇ ಅಭಿನಯದ ಮಜಲುಗಳನ್ನು ತೆರೆದಿಟ್ಟ ಚಾರ್ಲಿ , ಮಾಂತ್ರಿಕ ನಟ ಎಂದೇ ಕರೆಸಿಕೊಂಡವರು. ಮಾತೇ ಇಲ್ಲದೆ, ಬರೀ ಆಂಗಿಕ ಅಭಿನಯದಲ್ಲೇ ನಗೆಯ ಮೋಡಿ ಮಾಡುವ ಮೋಡಿಗಾರ. ಇನ್ನೊಂದೆಡೆ ಮಾನವತೆಯ ಕುರುಹಾಗಿ ಬೆಳೆದ ಕಲೆಗಾರ. ಸ್ವಂತ ಪ್ರತಿಭೆಯಿಂದ ಮೇಲೆ ಬಂದ ಈ ನಟ ನಮ್ಮನ್ನು ಸಾಕಷ್ಟು ನಗಿಸುತ್ತಾನೆ, ಅಷ್ಟೇ ಕಾಡಿಸುತ್ತಾನೆ ,ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತಾನೆ.
ಬಡತನದಲ್ಲೇ ಬೆಂದು ಬೆಳೆದ ಚಾರ್ಲಿ, ಏಳು ಬೀಳುಗಳನ್ನು ಕಾಣುತ್ತಲೇ ಬೆಳೆದ. ತಾನು ನೋವುಂಡರೂ, ಎಲ್ಲರನ್ನೂ ನಗಿಸುತ್ತಲೇ ನಡೆದ. ‘ನಾನು ಮಳೆಯಲ್ಲಿ ನಡೆಯಲು ಇಷ್ಟ ಪಡುತ್ತೇನೆ. ಏಕೆಂದರೆ ನಾನು ಅಳುವುದು ಯಾರಿಗೂ ಕಾಣದು' ಎಂಬ ಚಾರ್ಲಿ ಮಾತನ್ನು ಎಂದೆಂದಿಗೂ ಮರೆಯಲೂ ಸಾಧ್ಯವಿಲ್ಲ.
ಸುಮಾರು ಐದು ದಶಕಗಳ ಕಾಲ ಸಿನಿಮಾ ಮಾಧ್ಯಮದಲ್ಲಿದ್ದ ಚಾರ್ಲಿ ನಟನಾಗಿ ಅಭಿನಯಕ್ಕಿಳಿದು ಮುಂದೆ ಸಿನಿಮಾ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ ದುಡಿದ. ಒಮ್ಮೆ ತನ್ನ ಹಾಸ್ಯದ ಇಮೇಜ್ ಕಳಚಿ, ಗಂಭೀರವಾದ ಸಿನಿಮಾ ಮಾಡಹೊರಟು, ಕೈಸುಟ್ಟುಕೊಂಡ.
ಕಮ್ಯೂನಿಸ್ಟ್ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ್ದ ಚಾರ್ಲಿ ಆ ಕಾರಣಕ್ಕಾಗೇ ಅಮೆರಿಕಾ, ಇಂಗ್ಲೆಂಡಿನಂಥ ದೇಶಗಳಿಂದ ಶಂಕೆಗೆ ಒಳಗಾದ.
ಇರುವಷ್ಟು ದಿನ ಎಲ್ಲರನ್ನು ನಗಿಸುತ್ತಲೇ ಬದುಕಿದ್ದ ಒಂಬತ್ತು ಮಕ್ಕಳ ತಂದೆ ಚಾರ್ಲಿ , ೧೯೭೭ರ ಡಿಸೆಂಬರ್ ೨೫ರಂದು ಸ್ವಿರ್ಡರ್ ಲೆಂಡಿನಲ್ಲಿ ತೀರಿಕೊಂಡ.

ಅಪರೂಪದ ವಿಶಿಷ್ಟ ಪದಕೋಶ

(ಕೃತಿ ಬಿಡುಗಡೆಯ ಸಂದರ್ಭ: ಡಾ.ಗುರುಲಿಂಗ ಕಾಪ್ಸೆ, ಡಾ.ಎಂ.ಜಿ.ನಾಗರಾಜ, ಬಸವಕಲ್ಯಾಣ ತಾಲೂಕಿನ ಹಾರಕೂಡ ಹಿರೇಮಠದ ಶ್ರೀಗಳು, ಮುಂತಾದವರು. ಲೇಖಕ ಡಾ.ಸಂಗಮೇಶ ಸವದತ್ತಿಮಠ ಎಡದಿಂದ ಎರಡನೆಯವರು)
ವರ್ಣನಾತ್ಮಕ ವಚನಪದಕೋಶವು ಕನ್ನಡದಲ್ಲಿ ಒಂದು ಅಪರೂಪದ ವಿಶಿಷ್ಟಕೋಶವಾಗಿದೆ. ಒಂದು ಸಂಕ್ಷಿಪ್ತ ವಿಶ್ವ್ಟಕೋಶವಾಗಿದೆ. ವಚನಗಳಲ್ಲಿನ ಶಬ್ದಗಳಿಗೆ ಸಾಮಾನ್ಯ ನಿಘಂಟುವಿನ ಅರ್ಥ ಎಷ್ಟೋಕಡೆಗೆ ಸಾಕಾಗುವುದಿಲ್ಲ ಅಥವಾ ಹೊಂದುವುದಿಲ್ಲ. ತಾತ್ವಿಕ, ಸಾಂದರ್ಭಿಕ, ಭಾಷಿಕ ಮುಂತಾದವುಗಳ ಹಿನ್ನೆಲೆಯಲ್ಲಿ ವಚನಶಬ್ದಗಳನ್ನು ಅರ್ಥೈಸಬೇಕಾಗುತ್ತದೆ. ವಿಶಿಷ್ಟ ಪದಗಳಿಗೆ ವಿವರಣೆ ಬೇಕಾಗುತ್ತದೆ. ಅವಶ್ಯವಿದ್ದೆಡೆಗಳೆಲ್ಲ ಅಂಥ ವಿವರಣೆಗಳನ್ನು ಒಳಗೊಂಡ ಪದಾರ್ಥಕೋಶ ಇದಾಗಿದೆ. ಪ್ರಾಯಃ ಕನ್ನಡದಲ್ಲೆ ಇದು ಪ್ರಥಮ. ವಿವರಣೆಗಳನ್ನು ಮಾತ್ರ ಒಳಗೊಂಡ ಶಬ್ದಗಳು ಇಲ್ಲಿ ಇವೆಯೆಂತಲ್ಲ, ಸಾಮಾನ್ಯ ಓದುಗ ಅಥವಾ ವಿದ್ಯಾರ್ಥಿ ವಚನಗಳನ್ನು ಓದುವಾಗ ಅವನಿಗೆ ಕಠಿನವೆನಿಸಬಹುದಾದ ಸಾಮಾನ್ಯ ಅರ್ಥವನ್ನು ಒಳಗೊಂಡ ಸಾಮಾನ್ಯಪದಗಳೂ ಇಲ್ಲಿವೆ. ಅಂದರೆ ಬೇರೆ ಬೇರೆ ಮಟ್ಟದ ಓದುಗರಿಗೂ ಅಂದರೆ ಸಾಮಾನ್ಯರಿಂದ ವಿದ್ವಾಂಸರವರೆಗೂ ಉಪಯುಕ್ತವಾಗಬೇಕೆಂಬ ಉದ್ದೇಶದಿಂದ ಈ ಕೋಶವನ್ನು ರಚಿಸಲಾಗಿದೆ.
ಶಬ್ದ ಘಟಕದಲ್ಲಿ ಪರಸ್ಪರ ಹೆಣಿಕೆಗೊಂಡಿರುವ ಬಿಡಿ ರೂಪಕ್ಕಿಂತ ಅದರ ಒಟ್ಟು ಅರ್ಥವನ್ನು ಪರಿಗಣನೆಗೆ ತೆಗೆದುಕೊಂಡು ಅದರಲ್ಲಿ ಸೇರಿರುವ ಎಲ್ಲ ಬಿಡಿಘಟಕಗಳನ್ನೂ ಒಂದೇ ಪದಘಟಕದಲ್ಲಿ ಪರಿಗಣಿಸಿರುವುದು ಇದರ ವೈಶಿಷ್ಟ್ಯ. ಇದರಿಂದ ಪದಘಟಕದ ವ್ಯಾಪ್ತಿ ಒಂದರಿಂದ ಹಲವು ಶಬ್ದ ಸಮೂಹದವರೆಗೂ ವಿಸ್ತಾರಗೊಳ್ಳಬಹುದು. ಇದನ್ನು ಪದಘಟಕವೆನ್ನಬಹುದು. ಹೀಗಾಗಿ ಕೋಶದಲ್ಲಿನ ಎಂಟ್ರಿ ಪದ(ಘಟಕ)ಗಳ ಸಮೂಹಾರ್ಥ ಮಹತ್ವದ್ದೆನಿಸುತ್ತದೆ. ಇಲ್ಲಿ ನಮೂದಾದ ಇಂಥ ಒಟ್ಟು ಪದಘಟಕಗಳ ಸಂಖ್ಯೆ ಒಂಬತ್ತು ಸಾವಿರಕ್ಕೂ ಹೆಚ್ಚು.
ಪ್ರಸ್ತುತ ಕೋಶದ  ಮೊದಲನೆಯ ಭಾಗ ಪದಗಳಿಗೆ ಅರ್ಥ ಮತ್ತು ಅಗತ್ಯವೆನಿಸಿದ ಪದಗಳ ವಿವರಣೆಯನ್ನು ಒಳಗೊಂಡಿದೆ. ಎರಡನೆಯ ಭಾಗದಲ್ಲಿ ವಚನಗಳಲ್ಲಿನ ಕೆಲವು ಆಯ್ದ ವಿಶಿಷ್ಟ ಪದಗಳ ಅರ್ಥವಿವರಣೆ, ವಚನಕಾರರು ಮತ್ತು ಅವರ ವಚನಾಂಕಿತಗಳು, ವಚನಕಾರರ ಇತಿವೃತ್ತಗಳು ಮತ್ತು ವಚನಗಳಲ್ಲಿ ಉಲ್ಲೇಖಿತ  ಕೆಲವು ಸಾಂದರ್ಭಿಕ ಪೌರಾಣಿಕ ಘಟನೆಗಳ ವಿವರಗಳು ಇವೆ.
ಕನ್ನಡದಲ್ಲೆ ಪ್ರಥಮವೆನಿಸಿದ ಅಪರೂಪದ ಈ ಪದಕೋಶವನ್ನು ರಚಿಸಿದ ಕನ್ನಡ ಭಾಷಾವಿಜ್ಞಾನಿ, ಸಂಶೋಧಕರೆಂದು ಹೆಸರುಗಳಿಸಿದ ಡಾ.ಸಂಗಮೇಶ ಸವದತ್ತಿಮಠ ಅವರು ಕನರ್ಾಟಕಮತ್ತು ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು, ಮುಖ್ಯಸ್ಥರು, ಹಾಗೂ ಇತರ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯ(2003) ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ Emeritus Professor  ಆಗಿ ಪ್ರಸ್ತುತ ವರ್ಣನಾತ್ಮಕ ವಚನಪದಕೋಶವನ್ನು ರಚಿಸಿದ್ದಾರೆ.
ವರ್ಣನಾತ್ಮಕ ವಚನಪದಕೋಶದ ಪ್ರತಿಗಳು ಬೆಂಗಳೂರು, ಮೈಸೂರು, ಧಾರವಾಡ-ಹುಬ್ಬಳ್ಳಿ, ಮತ್ತು ಗುಲಬರ್ಗಾದಲ್ಲಿರುವ ಪ್ರಮುಖ ಪುಸ್ತಕವ್ಯಾಪಾರಿಗಳಲ್ಲಿ ಮತ್ತು ನವಕರ್ನಾಟಕದ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿವೆ, ಬೆಲೆ.ರೂ.300=00. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: samshodhana_vyasanga@yahoo.com ಅಥವಾ sangamesh.saundattimath@gmail.com  ದೂರವಾಣಿ: (0836)2444400. ಮೊ: 9845273736. 8095236470
ಶೀರ್ಷಿಕೆ:ವರ್ಣನಾತ್ಮಕ ವಚನ ಪದಕೋಶ (A Concise Encyclopedic  dictionary of Vachana literature) ಲೇಖಕರು: ಡಾ.ಸಂಗಮೇಶ ಸವದತ್ತಿಮಠ  ಪ್ರಕಾಶನ: ರೂಪರಶ್ಮಿ ಪ್ರಕಾಶನ ಧಾರವಾಡ ಪುಟ:500+ ಬೆಲೆ:ರೂ.300/-

ವಿಶ್ವ ಆರೋಗ್ಯದಿನದ ಶುಭಾಶಯಗಳೊಂದಿಗೆ

ಭಾರತದಲ್ಲಿ ಜನಾರೋಗ್ಯ ಸಾಧನೆ ದೇಶ ಸ್ವಾತಂತ್ರ್ಯ ಪಡೆದು ಆರು ದಶಕಗಳೇ ಕಳೆದರೂ ಸಾಧ್ಯವಾಗದಿರುವುದು ವಿಷಾದದ ಸಂಗತಿ. ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಹಣ ಬಹಳ ಕಡಿಮೆ. ಬಡತನ, ಅನಕ್ಷರತೆ ಹೆಚ್ಚಾಗಿರುವ ಈ ದೇಶದಲ್ಲಿ ಸಹಜವಾಗಿಯೇ ರೋಗರುಜಿನಗಳು ಕೂಡ ಅಧಿಕ. ಔಷಧಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿರುವುದರಿಂದ ಮತ್ತು ಸರ್ಕಾರವೂ ಕೂಡ ಖಾಸಗೀಕರಣ ನೀತಿಗೆ ಪ್ರೋತ್ಸಾಹ ಕೊಡುತ್ತಿರುವುದರಿಂದ ರೋಗ ಚಿಕಿತ್ಸೆಗೆ ತಗಲುವ ವೆಚ್ಚಕ್ಕಿಂತ ರೋಗಪತ್ತೆಯ ವಿಧಾನಗಳಿಗೆ ಜನತೆ ಹಣ ಹೆಚ್ಚು ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರಿಗೆ ಮತ್ತು ಅನಕ್ಷರಸ್ಥರಿಗೆ ಆರೋಗ್ಯ ವ್ಯವಸ್ಥೆ ಕಡಿಮೆ ಖರ್ಚಿನಲ್ಲಿ ಕೈಗೆಟಕುತ್ತಿಲ್ಲ. ಆರೋಗ್ಯ ಎಂಬುದು ಅವರ ಪಾಲಿಗೆ ಮರೀಚಿಕೆಯಾಗಿದೆ. ಭಾರತೀಯ ವೈದ್ಯಪದ್ಧತಿಯ ಚಿಕಿತ್ಸಾ ವಿಧಾನಗಳನ್ನು ಯಾವ ಪ್ರಮಾಣದಲ್ಲಿ ಬಳಸಬಹುದಿತ್ತೋ ಅಷ್ಟರಮಟ್ಟಿಗೆ ಬಳಕೆಯಾಗದಿರುವುದು ಬೇಸರದ ಸಂಗತಿ.
ಜನಾರೋಗ್ಯ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮತ್ತು ಔಷಧಿ ಕ್ರಿಯಾ ಸಮಿತಿಯಲ್ಲಿ ಸಕ್ರಿಯರಾಗಿರುವ ಡಾ. ಪ್ರಕಾಶ್ ಸಿ. ರಾವ್ ರವರು ರಚಿಸಿರುವ `ಜನಾರೋಗ್ಯದ ಸವಾಲುಗಳು’ ಪುಸ್ತಕ ವೈದ್ಯರ ಕಣ್ಣು ಹಾಗೂ ಮನಸ್ಸನ್ನು ತೆರೆಸುವಂತಿದೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಲೇಖಕರ ಜನಪರ ಕಾಳಜಿ ವ್ಯಕ್ತವಾಗುತ್ತದೆ. ವೈದ್ಯ ವೃತ್ತಿ ವ್ಯಾಪಾರೀಕರಣಗೊಂಡಿರುವ ಇಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಮತ್ತು ಔಷಧಿಗಳ ಜಗತ್ತಿನ ಹಲವು ಆಯಾಮಗಳ ಕುರಿತು ಈ ಪುಸ್ತಕ ಓದುಗರೆದುರು ಅನೇಕ ವಿಷಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ವೃತ್ತಿಯಲ್ಲಿ ನಿರತರಾದ ಪ್ರತಿಯೊಂದು ವೈದ್ಯರೂ ಓದಲೇಬೇಕಾದಂತಹ ಕೃತಿಯಿದು. ಕೇವಲ ಓದುವುದು ಮಾತ್ರವಲ್ಲ ವೃತ್ತಿ ಬದುಕಿನಲ್ಲೂ ಅಳವಡಿಸಿಕೊಂಡಲ್ಲಿ ಡಾ. ಪ್ರಕಾಶ್ ರಾವ್ ರವರ ಶ್ರಮ, ಪ್ರಯತ್ನ ಸಫಲತೆ ಪಡೆಯುತ್ತದೆ. ವೈದ್ಯರು ಮಾತ್ರವಲ್ಲ ಜನಸಾಮಾನ್ಯರ ಈ ವಿಷಯಗಳನ್ನು ಅರಿತುಕೊಂಡಲ್ಲಿ ಒಳಿತು. ಸರ್ಕಾರದ ನೀತಿಗಳನ್ನು ರೂಪಿಸುವವರು, ಮಂತ್ರಿಗಳು, ಅಧಿಕಾರ ವರ್ಗದವರೂ ಈ ಪುಸ್ತಕ ಓದಿದಲ್ಲಿ ನೀತಿ ನಿಯಮಾವಳಿ ರೂಪಿಸುವಾಗ ಬದಲಾವಣೆ ತರಲು ಸಾಧ್ಯವಾಗಬಹುದು.
`ಜನಾರೋಗ್ಯದ ಸವಾಲುಗಳು’ ಪುಸ್ತಕದಲ್ಲಿ ಲೇಖಕರು ತಿಳಿಸಿರುವ ಕೆಮ್ಮಿನ ಔಷಧಿಗಳು, ಸಂಮಿಶ್ರ ಔಷಧಿಗಳ ಕುರಿತ ವಿಚಾರ ಓದುಗರನ್ನು ಬೆಚ್ಚಿಬೀಳಿಸುತ್ತದೆ. ಜನಪರವಾದ ಔಷಧಿ ನೀತಿ ಜಾರಿಗೊಳಿಸುವಲ್ಲಿ ಸರ್ಕಾರ ಕುರುಡು ಮತ್ತು ಕಿವುಡಾಗುವುದು ದುಃಖಕರ ಸಂಗತಿ. ಲಸಿಕಾ ಕಾರ್ಯಕ್ರಮ ಜಾರಿಗೊಳಿಸುವಾಗ ನಿಗದಿತ ನಿಯಮಗಳನ್ನು ಅನುಸರಿಸದೇ ಜನರ ಜೀವದೊಡನೆ ಆಟವಾಡುವ ವ್ಯವಸ್ಥೆ ಮುಂದುವರೆಯುತ್ತಿರುವುದು ನಿಜಕ್ಕೂ ಅಪಾಯಕಾರಿ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಮಾತೃಮರಣ ಮತ್ತು ಶಿಶುಮರಣಗಳನ್ನು ತಡೆಗಟ್ಟಬಹುದಾಗಿದೆ. ಇಡೀ ದೇಶದ ಜನರಿಗೆ ಶುದ್ಧವಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶೌಚಾಲಯ ನಿರ್ಮಾಣ ಸಾಧ್ಯವಾದಲ್ಲಿ ಜನಾರೋಗ್ಯ ಕಷ್ಟವೆನಿಸಲಾರದು.
- ಡಾ. ವಸುಂಧರ ಭೂಪತಿ (ಅಧ್ಯಕ್ಷರು, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು)
- ಪುಸ್ತಕದ ಮುನ್ನುಡಿಯಿಂದ
ಶೀರ್ಷಿಕೆ: ಜನಾರೋಗ್ಯದ ಸವಾಲುಗಳು ಲೇಖಕರು:ಡಾ. ಪ್ರಕಾಶ್ ಸಿ ರಾವ್, ಪ್ರಕಾಶಕರು: ಚಿಂತನ ಪುಸ್ತಕ ಪುಟ:124 ಬೆಲೆ:ರೂ.60/-

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟ

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನೀಡುವ 2009-2010, 2010-2011ನೇ ಸಾಲಿನ ಅನುವಾದ ಪ್ರಶಸ್ತಿ ಮತ್ತು 2008, 2009ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗಳು ಪ್ರಕಟವಾಗಿವೆ.
2009-2010ನೇ ಸಾಲಿನಲ್ಲಿ ಡಾ. ಸಿ.ಪಿ. ಕೃಷ್ಣಕುಮಾರ್, ಡಾ. ಕೆ.ಎಲ್. ಗೋಪಾಲಕೃಷ್ಣ ರಾವ್, ಡಾ. ಉಮಾ ವಿರೂಪಾಕ್ಷ ಕುಲಕರ್ಣಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಮತ್ತು ಪ್ರೊ.ಕೆ.ಎಸ್. ಭಗವಾನ್ ಅವರು ಅನುವಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2010-2011ನೇ ಸಾಲಿನಲ್ಲಿ ಅನುವಾದ ಪ್ರಶಸ್ತಿಗೆ ಡಾ. ಸದಾನಂದ ಕನವಳ್ಳಿ, ಡಾ.ಜಿ. ರಾಮಕೃಷ್ಣ, ಜಿ.ಎನ್. ರಂಗನಾಥ ರಾವ್, ಎನ್.ಎಸ್. ಸಂಗೊಳ್ಳಿ ಮತ್ತು ಪ್ರೊ. ಪಾರ್ವತಿ ಜಿ. ಐತಾಳ್ ಭಾಜನರಾಗಿದ್ದಾರೆ. ಪ್ರಶಸ್ತಿ ರೂ 25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅವರು, ‘ವಿದ್ವಾಂಸರ ಒಟ್ಟಾರೆ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಇದೇ ತಿಂಗಳ ಕೊನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ’ ಎಂದು ತಿಳಿಸಿದರು.
ಪುಸ್ತಕ ಬಹುಮಾನ: 2008ನೇ ಸಾಲಿನಲ್ಲಿ ಕೆ.ಪಿ. ಸುರೇಶ್ (ಪುಸ್ತಕ- ಕೊಸಿಮೊ), ದಿವಂಗತ ಡಾ. ಎ. ಜಾನಕಿ (ಗೋದಾನ), ರವಿ ಬೆಳಗೆರೆ (ಚಲಂ), ಮಹಮ್ಮದ್ ಕುಳಾಯಿ (ಮಿತ್ತಬೈಲ್ ಯಮುನಕ್ಕ) ಮತ್ತು ಚಂದ್ರಕಾಂತ ಪೋಕಳೆ (ಭಂಡಾರ ಭೋಗ) ಅವರಿಗೆ ಉತ್ತಮ ಅನುವಾದಕ್ಕೆ ಪುಸ್ತಕ ಬಹುಮಾನ ಪ್ರಶಸ್ತಿ ದೊರೆತಿದೆ ಎಂದರು.
2009ನೇ ಸಾಲಿನಲ್ಲಿ ಮಾಧವ ಚಿಪ್ಪಳಿ (ಆರು ಟಾಲ್‌ಸ್ಟಾಯ್ ಕಥೆಗಳು ಪುಸ್ತಕ), ಡಾ.ಜೆ.ಎಸ್. ಕುಸುಮಗೀತಾ (ಅಂತಿಮ ಜ್ವಾಲೆ), ಡಾ.ಚಿದಾನಂದ ಸಾಲಿ (ಯಜ್ಞ – ಒಂಭತ್ತು ಕಥೆಗಳು), ಕೆ.ಕೆ. ಗಂಗಾಧರನ್ (ಬಳಲಿದ ಬಾಳಿಗೆ ಬೆಳಕು) ಮತ್ತು ಸುಮಿತ್ರಾ ಹಲವಾಯಿ (ಕನಸೆಂಬ ಊರುಗೋಲು) ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ ತಲಾ ರೂ 10 ಸಾವಿರ ನಗದು, ಫಲಕ ಒಳಗೊಂಡಿದೆ.

ಮರೆಯಲಾರದ ಮರೆಯಬಾರದ ಚೈತನ್ಯಕ್ಕೆ ನಮನ!


ಶೀರ್ಷಿಕೆ: Selected Writings of Shaheed Bhagat Singh ಸಂಪಾದಕರು: ಶಿವ್ ವರ್ಮಾ (Shiv Varma) ಪ್ರಕಾಶಕರು : ಸಮಾಜವಾದಿ ಸಾಹಿತ್ಯ ಸದನ (Samajawadi Sahitya Sadan)

ದಿ ಮಾರ್ಟಿರ್ ಭಗತ್ ಸಿಂಗ್ಸ್ ಎಕ್ಸ್ಪರಿಮೆಂಟ್ಸ್ ಇನ್ ರೆವೆಲ್ಯೂಷನ್

ಭಗತ್ ಸಿಂಗ್ ಅವರ ಬದುಕು ಮತ್ತು ಹೋರಾಟವನ್ನು ಕುರಿತಂತೆ ಅನೇಕ ಪುಸ್ತಕಗಳು ಪ್ರಕಟವಾಗಿವೆ. ಪ್ರಸ್ತುತ ಕೃತಿ ಭಿನ್ನವಾದದ್ದು ಮತ್ತು ಭಗತ್ ಸಿಂಗ ಅವರ ಬದುಕಿನ ಮೇಲೆ ಹೊಸ ಬೆಳಕನ್ನು ಚೆಲ್ಲುವಂಥದ್ದು.
ಖ್ಯಾತ ಪತ್ರಕರ್ತ ಕುಲದೀಪ ನಯ್ಯರ್ ಅವರು ಗತಕಾಲದ ಹಲವು ದಾಖಲೆಗಳನ್ನು ಶೋಧಿಸಿ, ಕಾಗದ ಪತ್ರಗಳನ್ನು ಪರಿಶೀಲಿಸಿ, ವ್ಯಕ್ತಿಗಳನ್ನು ಸಂದರ್ಶಿಸಿ, ಸಾಕಷ್ಟು ಅಧ್ಯಯನವನ್ನು ನಡೆಸಿ ಇಂಗ್ಲೀಷ್ನಲ್ಲಿ ರೂಪಿಸಿದ ಕೃತಿ `ದಿ ಮಾರ್ಟಿರ್ ಭಗತ್ ಸಿಂಗ್ಸ್ ಎಕ್ಸ್ಪರಿಮೆಂಟ್ಸ್ ಇನ್ ರೆವೆಲ್ಯೂಷನ್‘. ಅದರ ಕನ್ನಡ ಅನುವಾದವೇ `ಹುತಾತ್ಮ ಭಗತ್ ಸಿಂಗ್‘.
ಜೀವನ ಚರಿತ್ರೆಯಂತೆ ಕಂಡರೂ ಇದು ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಘಟನೆಗಳ ಮಂಡನೆ, ಸನ್ನಿವೇಶಗಳ ಚಿತ್ರಣ, ಭಾವನಾತ್ಮಕ ಸಂದರ್ಭಗಳನ್ನು ಸೆರೆಹಿಡಿದಿರುವ ಕ್ರಮ – ಇವೆಲ್ಲ ಈ ಕೃತಿಗೆ ಕಾದಂಬರಿಯ ಮೆರುಗನ್ನು ನೀಡಿವೆ. ಸೂಕ್ಷ್ಮ ಸಂವೇದನಾಶೀಲ ಲೇಖಕನೊಬ್ಬನ ಪ್ರತಿಭಾಪೂರ್ಣ ಸ್ಪರ್ಶವೂ ಇಲ್ಲಿ ಕಾಣಿಸುತ್ತದೆ. ಭಗತ್ ಸಿಂಗ್ ಅವರ ನಾಸ್ತಿಕ ಚಿಂತನೆಯನ್ನು ಕಟ್ಟಿ ಕೊಡುವ ಅವರ ಪ್ರಸಿದ್ಧ ಲೇಖನ `ನಾನೇಕೆ ನಾಸ್ತಿಕಕೂಡಾ ಇಲ್ಲಿ ಸೇರಿದೆ. ಈ ಕೃತಿಯ ಕನ್ನಡ ಅನುವಾದ ಮೂಲ ಕೃತಿಗೆ, ಮುಖ್ಯ ಸತ್ವಕ್ಕೆ, ಸೂಕ್ಷ್ಮ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿದೆ; ಸರಳವೂ ಸಹಜವೂ ಆಗಿರುವುದರಿಂದ ನಿರಾತಂಕ ಓದಿಗೆ ಸಹಕಾರಿಯಾಗಿಯೂ ಇದೆ.
ಶೀರ್ಷಿಕೆ : ಹುತಾತ್ಮ ಭಗತ್ ಸಿಂಗ್ ಲೇಖಕರು: ಕುಲ ದೀಪ ನಯ್ಯರ್ ಅನುವಾದ: ಬಿ. ಪಿ. ಬಸವರಾಜ್ ಪ್ರಕಾಶಕರು : ಲೋಹಿಯಾ ಪ್ರಕಾಶನ ಪುಟಗಳು : 120 ಬೆಲೆ: ರೂ.60/

ಹುತಾತ್ಮ ದಿನದ ಸಂದರ್ಭದಲ್ಲಿ ಅಮರ ಹುತಾತ್ಮ ಭಗತ್ ಸಿಂಗರ ಜೈಲಿನ ದಿನಚರಿ

1931 ರ ಮಾರ್ಚ್ 23. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಭಾರತೀಯರ ಪಾಲಿಗೆ ಅತ್ಯಂತ ದುಃಖದಾಯಕ ದಿನ. ಅಂದು ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳನ್ನು ಬ್ರಿಟಿಷ್ ಸರ್ಕಾರ  ನೇಣಿಗೇರಿಸಿದ ದಿನ. ಇಂದಿಗೂ ಭಗತ್ ಸಿಂಗ್ ಹುತಾತ್ಮನಾಗಿರದಿದ್ದರೆ ಈಗ ಇಷ್ಟು ವರ್ಷದ ಹಿರಿಯರಾಗಿರುತ್ತಿದ್ದರು ಅಯ್ಯೋ, ಆ ದಿನ ಕ್ಯಾಲೆಂಡರಿನಲ್ಲೇ ಇರಬಾರದಿತ್ತು ಎಂದು ದೇಶಭಕ್ತ ಭಾರತೀಯರು (ಹಿರಿಯ ಕಿರಿಯರೆನ್ನದೆ) ಹಂಬಲಿಸುವ ದಿನ. ಅವರ ಬಗ್ಗೆ ನೆನಸುವ ದಿನ. ಇವತ್ತು ಲೆಫ್ಟ್ ವರ್ಡ ಹೊರತಂದಿರುವ The Jail Notebook and Other Writings ಯನ್ನು ಅರ್ಧ ಬೆಲೆಗೆ ಮಾರುತ್ತಿದ್ದಾರೆ.
ಭಗತ್ ಸಿಂಗ್ ತನ್ನ ಕೊನೆಯ ಎರಡು ವರ್ಷಗಳನ್ನು ಜೈಲಿನಲ್ಲಿ ಗಲ್ಲು ಶಿಕ್ಷೆಯನ್ನು ಕಾಯುತ್ತಾ ಕಳೆದಿದ್ದರು. ಈ ಅವಧಿಯಲ್ಲಿ ಹುತಾತ್ಮ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾನೂನು ಸಮರಗಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದ ಒಂದು ಕಾನೂನು ಸಮರವನ್ನು ನಡೆಸುತ್ತಿದ್ದರು. ಇಷ್ಟೇ ಅಲ್ಲದೆ ನ್ಯಾಯಾಲಯವನ್ನೇ ಮಾದ್ಯಮ ಮಾಡಿಕೊಂಡು ತಮ್ಮ ಕ್ರಾಂತಿಕಾರಿ ಸಂದೇಶಗಳನ್ನು ದೇಶಾದ್ಯಂತ ಪ್ರಚಾರ ಮಾಡಿದರು.
ಅವರ ಹೋರಾಟದ ನಿಜಾಂಶ ತಿಳಿಯದ ಈಗಿನ ಜನತೆ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ಅನ್ಯಾಯವಾಗಿ ನೇಣಿಗೆ ಕೊರಳು ಕೊಟ್ಟರು, ಅವರು ಮನಸ್ಸು ಮಾಡಿದ್ದರೆ ಬದುಕಿರಬಹುದಾಗಿತ್ತು, ಅವರ ಹುತಾತ್ಮರಾಗುವ ನಿರ್ಧಾರ ತಪ್ಪು, ಬದುಕಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗಿತ್ತು ಎಂದೆಲ್ಲಾ ಹೇಳುತ್ತಾರೆ. ಆದರೆ ಭಗತ್ ಸಿಂಗ್ ಅವರು ಖಂಡಿತವಾಗಿಯು ಸುಮ್ಮನೆ ಹುತಾತ್ಮರಾಗಲಿಲ್ಲ. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಅಲ್ಪಾವಧಿಯ ಜೀವಮಾನದಲ್ಲಿ ಎಷ್ಟು ಸಾಧ್ಯವೋ ಅದಕ್ಕಿಂತ ಹೆಚ್ಚಿನ ಕೊಡುಗೆ ಭಗತ್ ಸಿಂಗ್ ಅವರದಿದೆ. ಅವರು ತಮ್ಮ ನೇಣಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನು ಸಮರ ಮಾಡಿ ಸಮಯ ವ್ಯರ್ಥ ಮಾಡದೇ ಆ ಅಮೂಲ್ಯ ಸಮಯವನ್ನು ದೇಶದ ಜನತೆಗೆ ಬ್ರಿಟೀಷ್ ಸರ್ಕಾರದ ಎಡಬಿಡಂಗಿತನವನ್ನು ಅರಿತುಕೊಳ್ಳುವಂತೆ ಮಾಡಿ ದೇಶದ ಜನತೆ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಜೈಲಿನಲ್ಲಿದ್ದೂ ಪ್ರೇರೇಪಣೆ ನೀಡಿದರು.
ಅಷ್ಟೇ ಅಲ್ಲ ಜೈಲಿನಲ್ಲಿ ಅವರು ನಾಲ್ಕು ಪುಸ್ತಕಗಳನ್ನೂ ಬರೆದಿದ್ದರು. ಆ ಪುಸ್ತಕಗಳು ಜೈಲಿನಿಂದ ಕಷ್ಟಪಟ್ಟು ಹೊರತರಲ್ಪಟ್ಟಿದ್ದರೂ ನಾಶ ಮಾಡಲ್ಪಟ್ಟಿವೆ. ಜೈಲಿನಲ್ಲೇ ಉಳಿದಿದ್ದ ಯುವ ಕ್ರಾಂತಿಕಾರಿಯ ಟಿಪ್ಪಣೆ ಪುಸ್ತಕ ಮಾತ್ರ ನಮಗೀಗ ಲಭ್ಯವಿದೆ.
ಯುವ ಕ್ರಾಂತಿಕಾರಿಯನ್ನು ಅಧ್ಯಯನ ಮಾಡಲು ಇದೊಂದು ಅದ್ಬುತ ಗ್ರಂಥ.
ಶೀರ್ಷಿಕೆ : The Jail Notebook and Other Writings ಲೇಖಕರು: ಭಗತ್ ಸಿಂಗ್ ಸಂಪಾದಕರು: ಚಮನ್ ಲಾಲ್ ಪ್ರಕಾಶಕರು: ಲೆಫ್ಟ್ ವರ್ಡ ಬೆಲೆ:ರೂ.350 (ಇಂದಿನ ಬೆಲೆ ರೂ.175/- ) ಪುಟಗಳು : 192

Talking Monkey

ಶ್ರೀ ಮಣ್ಣೆಮ್ಮ ದೇವಿ ಜಾತ್ರಾ ಮಹೋತ್ಸವ (ದಿನಾಂಕ:೨೫.೦೪.೨೦೧೧ ರಿಂದ ದಿನಾಂಕ:೦೧.೦೫.೨೦೧೧ ರವರೆಗೆ)











ದಿನಾಂಕ:೨೫.೦೪.೨೦೧೧  ರಂದು ಶ್ರೀ ಸೋಮೇಶ್ವರನಿಗೆ ಬೆಲ್ಲದಾರತಿ

ದಿನಾಂಕ:೨೬.೦೪.೨೦೧೧ ರಂದು ಶ್ರೀ ಮಣ್ಣೆಮ್ಮ ದೇವಿಗೆ ಉಪಹಾರ

ದಿನಾಂಕ:೨೭.೦೪.೨೦೧೧ ರಂದು ರಾಶಿ

ದಿನಾಂಕ:೨೮.೦೪.೨೦೧೧ ರಂದು  ಶ್ರೀ ಮಣ್ಣೆಮ್ಮ ದೇವಿಗೆ ತಂಬಿಟ್ಟಿನ ಆರತಿ

ದಿನಾಂಕ:೨೯.೦೪.೨೦೧೧ ರಂದು ಬಾಡೂಟ

ದಿನಾಂಕ:೩೦.೦೪.೨೦೧೧ ರಂದು ಶ್ರೀ ಮಣ್ಣೆಮ್ಮ ದೇವಿ ತೇರು

ದಿನಾಂಕ:೦೧.೦೫.೨೦೧೧ ರಂದು ಕಡೆಯ ಪರಿಷೆ, ಶ್ರೀ ಆಂಜನೇಯ ಸ್ವಾಮಿಗೆ ಬೆಲ್ಲದಾರತಿ, ಸುಲಿಗೆ ಸೇವೆ.


(ಶ್ರೀ ಮಣ್ಣೆಮ್ಮ ದೇವಿ ಜನ್ಮಸ್ತಳ )