ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ರಾಜಮನೆತನ ಹಂಪಿ ವಿಜಯನಗರ ಸಾಮ್ರಾಜ್ಯ. 13ನೇ ಶತಮಾನದಲ್ಲಿ ರಾಜರು ಕಟ್ಟಿಸಿದ ಅತ್ಯಂತ ಪ್ರಾಚೀನವಾದ ಬಹಳಷ್ಟು ದೇವಸ್ಥಾನಗಳು ಈಗಲೂ ಹಂಪಿಯಲ್ಲಿವೆ. ಅಲ್ಲದೆ ಕರ್ನಾಟಕದಲ್ಲಿ ರಾಜ ಮನೆತನದ ಆಳ್ವಿಕೆಯಲ್ಲಿ ಅತಿ ಹೆಚ್ಚು ದೇವಾಲಯಗಳು ಇದ್ದಿದ್ದು ಕೂಡ ಹಂಪಿಯಲ್ಲೇ.
ಶಾಸನಗಳ ಪ್ರಕಾರ ಹಂಪಿಯಲ್ಲಿ ಪ್ರಾಚೀನ ಕಾಲದ 70ಕ್ಕೂ ಅಧಿಕ ದೇವಸ್ಥಾನಗಳಿವೆ. ಆ ಎಲ್ಲಾ ದೇವಾಲಯಗಳಿಗೂ ರಾಜರು ದಾನ ರೂಪದಲ್ಲಿ ಚಿನ್ನದ ನಾಣ್ಯ, ವಜ್ರ, ವೈಢೂರ್ಯ ನೀಡುತ್ತಿದ್ದರು. ಆದರೆ ಈಗ ಹಂಪಿಯಲ್ಲಿ ನಾಲ್ಕೈದು ದೇವಾಲಯ ಹೊರತುಪಡಿಸಿದರೆ ಉಳಿದೆಲ್ಲವೂ ಪಾಳು ಬಿದ್ದಿವೆ. ಇವುಗಳ ಉತ್ಖನನ ನಡೆಸಿದರೆ ಪದ್ಮನಾಭ ದೇವಸ್ಥಾನದ ಹತ್ತು ಪಟ್ಟು ಸಂಪತ್ತು ಸಿಗಬಹುದು ಎನ್ನುವುದು ಇತಿಹಾಸಜ್ಞರ ಅಭಿಪ್ರಾಯ.
ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮ ಕಟ್ಟಿಸಿದ್ದ ಸಣ್ಣ ಪದ್ಮನಾಭ ದೇವಸ್ಥಾನದಲ್ಲಿ ಟನ್‌ಗಟ್ಟಲೆ ಚಿನ್ನಾಭರಣ ಸಿಕ್ಕಿರಬೇಕಾದರೆ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ ಮನೆತನಕ್ಕೆ ಸೇರಿದ ವಿರೂಪಾಕ್ಷ ದೇವಸ್ಥಾನದ ಸಂಪತ್ತು ಎಲ್ಲಿ ಹೋಗಿವೆ ಎನ್ನುವ ಪ್ರಶ್ನೆ ಸಹಜ.
ಇತಿಹಾಸಕಾರರು ಹಾಗೂ ಶಾಸನ ತಜ್ಞರು ಹೇಳುವ ಪ್ರಕಾರ ಹಂಪಿಯಲ್ಲಿ ಬಹಳಷ್ಟು ಕಡೆ ಅಪಾರ ಸಂಪತ್ತು ಸಂಗ್ರಹದ ನಿಧಿಗಳು ಇರುವುದು ಗ್ಯಾರಂಟಿ. ಅದರಲ್ಲಿಯೂ ವಿರೂಪಾಕ್ಷನ ಗುಡಿ, ಕಮಲಾಪುರದ ರಾಜರ ಅರಮನೆಯಾದ ಮಹಾನವಮಿ ದಿಬ್ಬ, ಅನೆಗೊಂದಿ ಆಂಜನೇಯ ಗುಡಿ, ಕೃಷ್ಣಸ್ವಾಮಿ ದೇವಸ್ಥಾನ, ತುಂಗಭದ್ರ ದಡದ ವಿಜಯ ವಿಠಲ ದೇವಸ್ಥಾನ, ಕಮಲಾಪುರದ ಪಟ್ಟಾಭಿರಾಮ ದೇವಸ್ಥಾನ, ಮಾತಂಗ ಪರ್ವತದ ಬುಡದಲ್ಲಿರುವ ಅಚ್ಚುತರಾಯ ದೇವಾಲಯ ಸುತ್ತಮುತ್ತ ಇಂಥ ಸಂಪತ್ತಿನ ನಿಧಿ ಇರುವುದು ಖಚಿತ. ಆದರೆ ಅವು ನಿರ್ಧಿಷ್ಟವಾಗಿ ಎಲ್ಲಿವೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ಈ ಮಧ್ಯೆ ವಿಜಯನಗರ ಸಾಮ್ರಾಜ್ಯದ ಖಜಾನೆ ಎಲ್ಲಿದೆ ಎನ್ನುವುದು ಶಾಸನ, ದಾಖಲೆಗಳಲ್ಲಿಯೂ ಇಲ್ಲ. ಸುರಕ್ಷತೆ ದೃಷ್ಟಿಯಿಂದ ರಾಜರು ತಮ್ಮ ಖಜಾನೆಯನ್ನು ಬಹಳ ಗೌಪ್ಯವಾಗಿಟ್ಟಿದ್ದರು. ಆದರೆ ವಿಶಾಲ ಹಂಪಿಯಲ್ಲಿ ಖಜಾನೆ ಇತ್ತು ಮತ್ತು ಅದನ್ನು ಸಂಪೂರ್ಣವಾಗಿ ಬ್ರಿಟಿಷರಿಂದ ದೋಚಲು ಆಗಿರಲಿಲ್ಲ. ಹಾಗಾದರೆ ರಾಜರ ಖಜಾನೆ ಎಲ್ಲಿದೆ ಎನ್ನುವುದು ಕೂಡ ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.
ವಿರೂಪಾಕ್ಷನ ದೇವಸ್ಥಾನದ ಭುವನೇಶ್ವರಿ ಗರ್ಭಗುಡಿ ಪೂರ್ವ ದಿಕ್ಕಿಗೆ ಸುಮಾರು 100 ಮೀಟರ್ ದೂರದಲ್ಲಿ ಅಪಾರ ಸಂಪತ್ತಿನ ಸಂಗ್ರಹ ಇದೆ ಎಂದು ಹೇಳಲಾಗುತ್ತಿದೆ. ಹಂಪಿ ಸುತ್ತಮುತ್ತ ಬಹಳಷ್ಟು ಕಡೆ ಸುವರ್ಣ ನಾಣ್ಯ ಹೂತಿಟ್ಟಿರುವ ಬಗ್ಗೆ ಶಾಸನಗಳು ಉಲ್ಲೇಖಿಸಿವೆ.
ಈ ಮಧ್ಯೆ, 'ಆದರೆ ಹಂಪಿಯಲ್ಲಿ ಇರಬಹುದಾದ ಸಂಪತ್ತು ಶೋಧನೆ ವೈಜ್ಞಾನಿಕವಾಗಿ ನಡೆಯಬೇಕು. ಶೋಧನೆಯಿಂದ ಯಾವುದೇ ಕಾರಣಕ್ಕೂ ಹಂಪಿ ಪರಂಪರೆ, ಸ್ಮಾರಕ ಅಥವಾ ಇತಿಹಾಸಕ್ಕೆ ಧಕ್ಕೆಯಾಗಬಾರದ್ದು' ಎಂದು ಡಾ. ಡಿ.ವಿ. ಪರಮಶಿವಮೂರ್ತಿ, ಹಂಪಿ ಕನ್ನಡ ವಿವಿ ಶಾಸನಶಾಸ್ತ್ರ ವಿಭಾಗ ಮುಖ್ಯಸ್ಥರು ಎಚ್ಚರಿಸಿದ್ದಾರೆ.